ಬೆಂಗಳೂರು: ಕಳೆದ ಭಾನುವಾರ ನಡೆದ ರಾಜ್ಯ ವಿಶೇಷ ಮೀಸಲು ಪೊಲೀಸ್ ಪಡೆಯ (ಕೆಎಸ್ಆರ್ಪಿ) ಕಾನ್ ಸ್ಟೇಬಲ್ ಹಾಗೂ ಐಆರ್ಬಿ ನೇಮಕಾತಿ ಪರೀಕ್ಷೆಯಲ್ಲಿ ಅಸಲಿ ಅಭ್ಯರ್ಥಿಗಳ ಸೋಗಿನಲ್ಲಿ ಪರೀಕ್ಷೆ ಬರೆದಿದ್ದ ನಕಲಿ ಅಭ್ಯರ್ಥಿಗಳ ಪತ್ತೆ ಪ್ರಕರಣ ಸಂಬಂಧದ ತನಿಖೆಯಲ್ಲಿ ಮಹತ್ವದ ವಿಚಾರಗಳು ಬಯಲಾಗಿವೆ.
ಪ್ರಕರಣ ಗಂಭೀರತೆ ಪಡೆಯುತ್ತಿದ್ದಂತೆ ವಿಶೇಷ ತಂಡ ರಚಿಸಿ ತನಿಖೆ ನಡೆಸಿದಾಗ, ಪ್ರಮುಖ ಆರೋಪಿ 9 ಮಂದಿ ನಕಲಿ ಆಭ್ಯರ್ಥಿಗಳನ್ನು ತಯಾರು ಮಾಡಿ ಅಸಲಿ ಆಭ್ಯರ್ಥಿಗಳ ಸೋಗಿನಲ್ಲಿ ಪರೀಕ್ಷೆ ಬರೆಯಲು ಕಳುಹಿಸಿದ್ದ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಕಳೆದ ಭಾನುವಾರ ನಡೆದಿದ್ದ ಕೆಎಸ್ಆರ್ಪಿ ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ, ಬೆಂಗಳೂರಿನಲ್ಲಿ ಆರು ಮಂದಿ ನಕಲಿ ಆಭ್ಯರ್ಥಿಗಳನ್ನು ನಗರ ಪೊಲೀಸರು ಪತ್ತೆ ಹಚ್ಚಿದ್ದರು. ಇನ್ನುಳಿದ ನಾಲ್ಕು ಆರೋಪಿಗಳು ಬೆಳಗಾವಿಯಲ್ಲಿ ಸಿಕ್ಕಿಬಿದ್ದಿದ್ದರು. ಇದೇ ಆರೋಪದಡಿ ವಿಜಯ್ ಪುಡಬಂಗಿ ಎಂಬಾತನ ಹೆಸರಿನಲ್ಲಿ ಸೋಮಯ್ಯ ಹಿರೇಮಠ್ ಪರೀಕ್ಷೆ ಬರೆದಿದ್ದ. ಇಬ್ಬರನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದರು. ಇವರು ನೀಡಿದ ಮಾಹಿತಿ ಮೇರೆಗೆ ಪ್ರಕರಣದ ಕಿಂಗ್ಪಿನ್ ಲಕ್ಷ್ಮಣ್ ಪರಣ್ಣನವರ್ ನನ್ನು ಸೆರೆಹಿಡಿದಿದ್ದರು.
ಇದನ್ನೂ ಓದಿ: ಬೆಳಗಾವಿ : ಪೊಲೀಸ್ ಪರೀಕ್ಷೆ ಬರೆಯುತ್ತಿದ್ದ ನಾಲ್ವರು ನಕಲಿ ಅಭ್ಯರ್ಥಿಗಳ ಬಂಧನ
ಬೆಳಗಾವಿಯಲ್ಲಿ ಫೈನಾನ್ಶಿಯರ್ ಆಗಿರುವ ಲಕ್ಷ್ಮಣ್ ನನ್ನು ಸಾಕಷ್ಟು ಜನರು ಸಂಪರ್ಕಿಸಿ ಪರೀಕ್ಷೆಯಲ್ಲಿ ಪಾಸು ಮಾಡಿಸಲು ಹಣ ಕೊಟ್ಟಿದ್ದರಂತೆ. ಇದರಂತೆ ಲಕ್ಷ್ಮಣ್ 9 ಮಂದಿ ನಕಲಿ ಅಭ್ಯರ್ಥಿಗಳನ್ನು ತಯಾರು ಮಾಡಿದ್ದ. ಇವನ ಸೂಚನೆಯಂತೆ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಅಸಲಿ ಅಭ್ಯರ್ಥಿಗಳ ವೇಷದಲ್ಲಿ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಸದ್ಯ ಸಿಕ್ಕಿರುವ ನಕಲಿ ಅಭ್ಯರ್ಥಿಗಳೆಲ್ಲಾ ಬಾಗಲಕೋಟೆ, ಬೆಳಗಾವಿ ಮೂಲದವರಾಗಿದ್ದಾರೆ.
ಮೂರು ವಿಶೇಷ ತಂಡ ರಚನೆ:
ಪ್ರಕರಣ ಆಳ-ಅಗಲ ಅರಿಯಲು ಮೂರು ವಿಶೇಷ ತಂಡ ರಚಿಸಲಾಗಿದ್ದು, ಬೆಳಗಾವಿ, ಬಾಗಲಕೋಟೆಯಲ್ಲಿ ಬೀಡುಬಿಟ್ಟಿದೆ. ಇನ್ನು ಪರವಣ್ಣನವರ್ ಅಸಲಿ ಹಾಗೂ ನಕಲಿ ಅಭ್ಯರ್ಥಿಗಳಿಗೆ ಮೀಡಿಯೇಟರ್ ಆಗಿದ್ದ. ಆರೋಪಿಗಳ ಪೈಕಿ 7 ಜನ ಹೊಸ ಇನ್ನುಳಿದ ಮೂರು ಜನ ರಿಪೀಟರ್ ಅಭ್ಯರ್ಥಿಗಳಾಗಿದ್ದಾರೆ. ಕೇವಲ ಇದೊಂದೇ ಪರೀಕ್ಷೆ ಅಲ್ಲದೆ ಇನ್ನುಳಿದ ಪರೀಕ್ಷೆಯಲ್ಲೂ ಇದೇ ರೀತಿ ಗೋಲ್ ಮಾಲ್ ನಡೆದಿದೆ. ಇದರ ಬಗ್ಗೆಯೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಯೊಮೆಟ್ರಿಕ್ ವ್ಯವಸ್ಥೆ ಇಲ್ಲದಿರುವುದೇ ಎನ್ಕ್ಯಾಷ್:
ಕೊರೊನಾ ಬಿಕ್ಕಟ್ಟು ಹಿನ್ನೆಲೆ, ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷೆಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇರಲಿಲ್ಲ. ಕೇವಲ ಗುರುತಿನ ಹಾಗೂ ಆಧಾರ್ ಕಾರ್ಡ್ ತರಲು ತಿಳಿಸಲಾಗಿತ್ತು. ಇದನ್ನೇ ದುರುಪಯೋಗಪಡಿಸಿಕೊಂಡು ನಕಲಿ ಆಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಕಳೆದ ವರ್ಷ 2019ರಲ್ಲಿ ನಡೆದಿದ್ದ ಸಿವಿಲ್ ಪೊಲೀಸ್ ಪರೀಕ್ಷೆಗೆ ಬಯೊ ಮೆಟ್ರಿಕ್ ಇತ್ತು. ಪರೀಕ್ಷಾ ಕೊಠಡಿಗೆ ಬರುವ ಮುನ್ನ ಸ್ಯಾಂಪಲ್ ಕೊಡಲು ತಿಳಿಸಲಾಗಿತ್ತು. ಎಲ್ಲಾ ಸ್ಯಾಂಪಲ್ಸ್ ಮ್ಯಾಚ್ ಆಗಿ, ಪರೀಕ್ಷೆ ಕೂಡ ಸುಸೂತ್ರವಾಗಿ ನಡೆದಿತ್ತು. ಆದರೆ ಈ ಬಾರಿ ಬಯೊ ಮೆಟ್ರಿಕ್ ಇಲ್ಲದಿರುವುದು ಸಮಸ್ಯೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ: ಕೆಎಸ್ಆರ್ಪಿ ಪರೀಕ್ಷೆ ಬರೆದ ನಕಲಿ ಅಭ್ಯರ್ಥಿ ಬಂಧನ