ಬೆಂಗಳೂರು: ನ್ಯಾಯಾಧೀಶರಿಗೆ ಹುಸಿ ಬಾಂಬ್ ಪತ್ರ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಆಸ್ತಿ ವಿಚಾರಕ್ಕಾಗಿ ಜಡ್ಜ್ ಹೆಸರಿನಲ್ಲಿ ಬೆದರಿಕೆ ಪತ್ರ ಬರೆದಿದ್ದಾರೆ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.
ಯಾರೋ ಒಂದು ಬೆದರಿಕೆ ಪತ್ರ ಹಾಗೂ ಸ್ಫೋಟಕವನ್ನು ಜಡ್ಜ್ ಹೆಸರಿಗೆ ಪೋಸ್ಟ್ ಮಾಡಿದ್ದರು. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ವೇಳೆ ತಿಪಟೂರು ಮೂಲದ ರಾಜಶೇಖರ್ ಎಂಬ ವ್ಯಕ್ತಿ ಸಿಕ್ಕಿಬಿದ್ದಿದ್ದು, ಆಸ್ತಿ ವಿವಾದಕ್ಕಾಗಿ ತಾನೇ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. 2019ರಲ್ಲಿ ಪೋಕ್ಸೋ ಕೇಸ್ ಸೇರಿದಂತೆ ಮೂರು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.
ಆರೋಪಿ ರಾಜಶೇಖರ್ ಕಳೆದ ಎರಡು ತಿಂಗಳಿಂದ ಬೆದರಿಕೆ ಪತ್ರ ಕಳಿಸೋಕೆ ಮಾಸ್ಟರ್ ಪ್ಲಾನ್ ರೂಪಿಸಿದ್ದನಂತೆ. ಬಸವಲಿಂಗಪ್ಪ ಎಂಬುವರ ಮೊದಲ ಹೆಂಡತಿಯ ಮಗಳನ್ನ ಆರೋಪಿ ಮದುವೆಯಾಗಿದ್ದು, ರಾಜಶೇಖರ್ ಎರಡನೇ ಹೆಂಡತಿಯ ಮಗಳನ್ನ ರಮೇಶ್ ಎಂಬಾತ ಮದುವೆಯಾಗಿದ್ದ. ಈ ವೇಳೆ ರಮೇಶ್ ಅಪ್ರಾಪ್ತೆಯನ್ನ ಮದುವೆ ಆಗಿದ್ದಾನೆ ಎಂದು ಆರೋಪಿ ಕ್ಯಾತೆ ತೆಗೆದಿದ್ದ. ಈ ವೇಳೆ ರಮೇಶ್ ಹೆಂಡತಿ ರಾಜಶೇಖರ್ ಲೈಂಗಿಕ ಕಿರುಕುಳ ನೀಡ್ತಾ ಇದ್ದಾನೆ ಎಂದು ದೂರು ನೀಡಿದ್ದಳು. ಆಗ 40 ದಿನ ಜೈಲಿಗೆ ರಾಜಶೇಖರ್ ಹೋಗಿ ಬಂದಿದ್ದ.
ನಂತರ ಬಸವಲಿಂಗಪ್ಪನಿಗೆ ಎರಡೂವರೆ ಎಕರೆ ಜಮೀನಿಗಾಗಿ ರಮೇಶ್ ಹಾಗೂ ರಾಜಶೇಖರ್ ನಡುವೆ ಜಗಳ ಶುರುವಾಗಿತ್ತು. ಇದೇ ವಿಚಾರವಾಗಿ ಎರಡು ಎಫ್ಐ ಆರ್ ರಾಜಶೇಖರ್ ವಿರುದ್ಧ ದಾಖಲಾಗಿದ್ದವು. ಹೇಗಾದರೂ ಮಾಡಿ ರಮೇಶ್ ಹಾಗು ಅವರ ಕಡೆಯವರಿಗೆ ಬುದ್ಧಿ ಕಲಿಸಲು ಬಾಂಬ್ ಬೆದರಿಕೆ ಕರೆ ಪತ್ರ ಬರೆಯಲು ತೀರ್ಮಾನಿಸಿದ್ದ. ಪ್ಲಾನ್ ನಂತೆ ತಿಪಟೂರು ಬಳಿಯಿರುವ ಕ್ವಾರಿ ಕೆಲಸ ನಡೆಯುವ ಕರಡಿಗುಡ್ಡದಲ್ಲಿ ಡಿಟೋನೇಟರ್ ಖರೀದಿಸಿದ್ದ.
ಅದರಂತೆ ಕಳೆದ 9 ದಿನಗಳ ಹಿಂದೆ ಪತ್ರವನ್ನು ಪೋಸ್ಟ್ ಮಾಡಲು ಯೋಜನೆ ರೂಪಿಸಿಕೊಂಡಿದ್ದ. ರಮೇಶ್ ನನ್ನ ಏನಾದ್ರು ಮಾಡಿ ಬಲವಾದ ಸಾಕ್ಷ್ಯದ ಮೇಲೆ ಜೈಲು ಸೇರಿಸಲು ಪ್ಲಾನ್ ಮಾಡಿದ್ದ ಆರೋಪಿಯು ಪತ್ರಿನಿತ್ಯ ಎರಡು ತಿಂಗಳಿಂದ ದಿನಪತ್ರಿಕೆ ಓದುತ್ತಿದ್ದ. ಸ್ಯಾಂಡಲ್ವುಡ್ ಡ್ರಗ್ಸ್ ಹಾಗೂ ಡಿ ಜೆ ಹಳ್ಳಿ ಪ್ರಕರಣದ ಲಿಂಕ್ ಕೊಟ್ಟರೆ ರಮೇಶ್ ಗೆ ಜೀವನ ಪೂರ್ತಿ ಶಿಕ್ಷೆ ಆಗುತ್ತೆ ಅಂದುಕೊಂಡು ಈ ರೀತಿ ಪತ್ರ ಬರೆದಿದ್ದಾನೆ ಎಂದು ತಿಳಿದುಬಂದಿದೆ.