ಬೆಂಗಳೂರು: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತೆರಿಗೆ ಹಾಗೂ ಇತರೆ ವಿನಾಯತಿಯಲ್ಲಿ ಮೊಬೈಲ್, ಕಾರು ಹಾಗೂ ಇತರೆ ವಸ್ತುಗಳನ್ನು ಖರೀದಿಸಿ ಕೊಡುತ್ತೇನೆ ಎಂದು ನಂಬಿಸಿ ಹತ್ತಾರು ಮಂದಿಗೆ ವಂಚಿಸಿದ ನಕಲಿ ಸೇನಾಧಿಕಾರಿಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಮೂಲದ ಅಂಜನೇಷ್ ಮಟಪತಿ(31) ಬಂಧಿತ ವ್ಯಕ್ತಿ. ಈತನಿಂದ ನಕಲಿ ಪಿಸ್ತೂಲ್, ಸೇನೆಯ ನಕಲಿ ಗುರುತಿನ ಚೀಟಿ, ಸಮವಸ್ತ್ರ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಆರೋಪಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಬಳಿಕ ಸೇನಾಧಿಕಾರಿಗಳಿಗೆ ತೆರಿಗೆ ವಿನಾಯಿತಿ ದೊರೆಯುವ ವಿಚಾರ ತಿಳಿದುಕೊಂಡು ಅಮಾಯಕ ಜನರನ್ನು ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈತ ಇತ್ತೀಚೆಗೆ ಸುಬ್ರಹ್ಮಣ್ಯನಗರ ನಿವಾಸಿ ನಾಗೇಂದ್ರ ಮತ್ತು ಅವರ ಸಂಬಂಧಿಯೊಬ್ಬರಿಗೆ ಸುಮಾರು 23 ಲಕ್ಷ ರೂ. ವಂಚಿಸಿದ್ದಾನೆ. ನಾಗೇಂದ್ರ ಅವರ ದೂರದ ಸಂಬಂಧಿಯೊಬ್ಬರ ಮೂಲಕ ಪರಿಚಯವಾದ ಮಟಪತಿ, ತಾನೂ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನಗೆ ತೆರಿಗೆ ಹಾಗೂ ಇತರೆ ವಿನಾಯಿತಿಗಳಿದ್ದು, ಮೊಬೈಲ್, ಕಾರುಗಳನ್ನು ತೆರಿಗೆರಹಿತವಾಗಿ ಖರೀದಿಸಿಕೊಡುತ್ತೇನೆ. ಆದರೆ, ಅದಕ್ಕೆ ಇಂತಿಷ್ಟು ಕಮಿಷನ್ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ.
ಮಟಪತಿ ಮಾತುಗಳನ್ನು ಒಪ್ಪಿದ ನಾಗೇಂದ್ರ ಹಾಗೂ ಅವರ ಸಂಬಂಧಿಗಳು ಕಾರು ಮತ್ತು ಜೀಪ್ ಖರೀದಿಸುವ ಸಲುವಾಗಿ ಆರೋಪಿ ಖಾತೆಗೆ ಹಂತಹಂತವಾಗಿ ಹಣ ಜಮೆ ಮಾಡಿದ್ದಾರೆ. ಆ ನಂತರ ಆರೋಪಿ ಯಾವುದೇ ಸಂಪರ್ಕಕ್ಕೆ ಸಿಕ್ಕಿಲ್ಲ. ಕೆಲ ದಿನಗಳ ಹಿಂದೆ ಫೋನ್ ಕರೆಗೆ ಸಿಕ್ಕಾಗ ಆರೋಪಿ, ಕಾರು ಖರೀದಿಗೆ ಹಣ ಕೊಟ್ಟಿದ್ದೇನೆ. ಕೆಲವೇ ದಿನಗಳಲ್ಲಿ ಹಣ ಬರುತ್ತದೆ ಎಂದು ಸುಳ್ಳು ಹೇಳುತ್ತಿದ್ದ. ಅನುಮಾನಗೊಂಡು ಆತನ ಹಿನ್ನೆಲೆ ಪರಿಶೀಲಿಸಿದಾಗ ಆರೋಪಿ 'ನಕಲಿ ಸೇನಾಧಿಕಾರಿ' ಎಂಬುದು ಗೊತ್ತಾಗಿದೆ.
ಆರೋಪಿ ಇದೇ ರೀತಿಯಲ್ಲಿ ಹತ್ತಾರು ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಈ ಮಧ್ಯೆ ಬಳ್ಳಾರಿ ಮೂಲದ ಉದ್ಯಮಿಯೊಬ್ಬರಿಗೂ ವಂಚಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಅಂಜನೇಷ್ ಮಟಪತಿ ಹಣ ವಂಚನೆ ಮಾತ್ರವಲ್ಲದೆ, ಮೂವರು ಯುವತಿಯರಿಗೂ ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾನೆ. ಈ ಪೈಕಿ ಇಬ್ಬರು ಯುವತಿಯರ ಜತೆ ನಿಶ್ಚಿತಾರ್ಥವೂ ಆಗಿತ್ತು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮಾಹಿತಿ ನೀಡಿದ್ದಾರೆ.