ಬೆಂಗಳೂರು: ವಿಪತ್ತು ನಿರ್ವಹಣಾ ಕಾಯ್ದೆಯನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನ ಮಾಡದ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನ್ಯಾಯಾಲಯ ಸೂಕ್ತ ಆದೇಶ ಹೊರಡಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಬರ ನಿರ್ವಹಣೆಯಲ್ಲಿ ಅಗತ್ಯ ಕ್ರಮಕೈಗೊಳ್ಳದ ಸರ್ಕಾರದ ಕ್ರಮ ಪ್ರಶ್ನಿಸಿ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎ.ಮಲ್ಲಿಕಾರ್ಜುನ ಹಾಗೂ ಹೈಕೋರ್ಟ್ ಕಾನೂನು ಸೇವಾ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಸರ್ಕಾರದ ಪರ ವಾದ ಮಂಡಿಸಿ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಪೀಠಕ್ಕೆ ಸಲ್ಲಿಸಿದರು.
ಸಿಎಂ ನೇತೃತ್ವದ ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ 2019ರಲ್ಲಿ ಕೇವಲ ಎರಡು ಸಭೆಗಳನ್ನು ನಡೆಸಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಕಳೆದ 15 ವರ್ಷಗಳಲ್ಲಿ ಕೇವಲ 14 ಸಭೆ ನಡೆಸಿರುವುದು ಮತ್ತು 2017 ಮತ್ತು 2018ರಲ್ಲಿ ಜಿಲ್ಲಾ ಪ್ರಾಧಿಕಾರ ಮತ್ತು ಸಮಿತಿಗಳು ಇಡೀ ವರ್ಷದಲ್ಲಿ ಒಂದು ಮತ್ತು ಎರಡು ಸಭೆಗಳನ್ನಷ್ಟೇ ನಡೆಸಿರುವ ಅಂಶವನ್ನು ಪ್ರಮಾಣಪತ್ರದಲ್ಲಿ ಗಮನಿಸಿದ ಪೀಠ ಬೇಸರ ವ್ಯಕ್ತಪಡಿಸಿತು.
ಸರ್ಕಾರದ ಈ ರೀತಿಯ ಕಾರ್ಯವೈಖರಿಯಿಂದ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯವು ಸರ್ಕಾರಕ್ಕೆ ಸೂಕ್ತ ಮತ್ತು ಸವಿಸ್ತಾರವಾದ ನಿರ್ದೇಶನಗಳನ್ನು ನೀಡಬೇಕಾದ ಅವಶ್ಯಕತೆ ಇದೆ. ಹೀಗಾಗಿ, ಕಾಯ್ದೆ ಜಾರಿಗೆ ಬಂದ ದಿನನಿಂದ ಈವರೆಗೆ ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ, ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ, ಜಿಲ್ಲಾ ಮಟ್ಟದ ಪ್ರಾಧಿಕಾರ ಮತ್ತು ಸಮಿತಿಗಳು ಎಷ್ಟೆಷ್ಟು ಸಭೆಗಳನ್ನು ನಡೆಸಿವೆ? ಯಾವ ದಿನಾಂಕಗಳಲ್ಲಿ ನಡೆಸಲಾಗಿದೆ ಎಂಬ ವಿವರಗಳನ್ನು ಸಲ್ಲಿಸಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಪೀಠ, ವಿಚಾರಣೆಯನ್ನು ಮಾ.6ಕ್ಕೆ ಮುಂದೂಡಿತು.