ಬೆಂಗಳೂರು: ನಗರ ಮತ್ತು ಗ್ರಾಮೀಣ ಭಾಗದ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮ ಮಾಡಿಕೊಡಲು 94ಸಿ, 94ಸಿಸಿ ಅಡಿ ಅರ್ಜಿ ಸ್ವೀಕರಿಸಲು ಮತ್ತೊಂದು ಬಾರಿ ಅವಧಿ ವಿಸ್ತರಣೆ ಮಾಡಲು ಪರಿಶೀಲನೆ ನಡೆಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.
ಪ್ರಶ್ನೋತ್ತರ ಕಲಾಪದ ವೇಳೆ ಮಾಲೂರು ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2015 ರಿಂದ 94ಸಿ, 94ಸಿಸಿ ಅಡಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಪ್ರಸ್ತುತ ಇನ್ನೊಂದು ವಾರ ಕಾಲಾವಕಾಶ ಇದೆ ಎಂದರು. ಈ ಹಂತದಲ್ಲಿ ವಿಧಾನಸಭೆಯಲ್ಲಿದ್ದ ಬಹುತೇಕ ಶಾಸಕರು ಪಕ್ಷಾತೀತವಾಗಿ ಅರ್ಜಿ ಸ್ವೀಕರಿಸುವ ಅವಧಿಯನ್ನು ವಿಸ್ತರಣೆ ಮಾಡುವಂತೆ ಮನವಿ ಮಾಡಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಬಹಳಷ್ಟು ಮಂದಿ ಬಡವರು ಇನ್ನೂ ಅರ್ಜಿ ಸಲ್ಲಿಸಿಲ್ಲ. ಈಗ ಎಲ್ಲೆಡೆ ಕೊರೊನಾ ಸೋಂಕಿನ ಭಯ ಆವರಿಸಿದೆ. ಸರ್ಕಾರವೇ ಹಲವು ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದೆ. ಜನ ಹೊರಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಸುಮಾರು 3 ತಿಂಗಳ ಕಾಲ ವಿಸ್ತರಣೆ ಮಾಡಿ ಎಂದು ಒತ್ತಾಯಿಸಿದರು.
ಆಗ ಉತ್ತರ ನೀಡಿದ ಸಚಿವರು, ಈಗಾಗಲೇ 9 ಬಾರಿ ವಿಸ್ತರಣೆಯಾಗಿದೆ. ಇನ್ನೇಷ್ಟು ಬಾರಿ ವಿಸ್ತರಣೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಬಡವರ ಪರವಾಗಿ ಎಲ್ಲಾ ಶಾಸಕರು ಒಕ್ಕೊರಲ ಒತ್ತಾಯ ಮಾಡಿರುವುದರಿಂದ ಸರ್ಕಾರ ಪರಿಶೀಲನೆ ನಡೆಸಲಿದೆ. ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಎಷ್ಟು ಸಮಯ ಅವಧಿ ವಿಸ್ತರಣೆ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.