ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ 243 ವಾರ್ಡ್‌ಗಳಲ್ಲಿನ ಮತದಾರರ ಕರಡು ಪಟ್ಟಿಗೆ ಸಪ್ಟೆಂಬರ್ 2 ರೊಳಗಾಗಿ ಆಕ್ಷೇಪಣೆ ಮತ್ತು ಹಕ್ಕುಗಳನ್ನು ಸಲ್ಲಿಸುವಂತೆ ನಿರ್ದೇಶಿಸಲಾಗಿತ್ತು. ಆದರೆ ಇದೀಗ ಏಳು ದಿನ ಅವಧಿ ವಿಸ್ತರಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಚುನಾವಣಾ ಆಯೋಗವು ಆಗಸ್ಟ್ 25ರಂದು ಮತದಾರರ ಕರಡುಪಟ್ಟಿ ಬಿಡುಗಡೆ ಮಾಡಿತ್ತು. ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಆಗುವಂತೆ ಬಿಬಿಎಂಪಿ ವೆಬ್‌ಸೈಟ್ bbmp.gov.in ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಹಲವು ಕಾರಣಗಳಿಂದ ಸಾರ್ವಜನಿಕರು ಇನ್ನೂ ಪರಿಶೀಲನೆ ನಡೆಸದ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಮತದಾರರ ಅನುಕೂಲಕ್ಕಾಗಿ ಆಕ್ಷೇಪಣೆ ಸಲ್ಲಿಸಲು ಇನ್ನೂ ಕೆಲ ದಿನಗಳ ಕಾಲಾವಕಾಶ ಕೋರಿ ಪಾಲಿಕೆ ಮುಖ್ಯ ಆಯುಕ್ತರು ಪತ್ರ ಬರೆದು ಕೋರಿದ್ದರು ಎಂದು ತಿಳಿಸಿದೆ.
ಸದ್ಯ ಎಲ್ಲ ಮತದಾರರ ನೋಂದಣಾಧಿಕಾರಿ ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲೂ ಸಾರ್ವಜನಿಕರ ವೀಕ್ಷಣೆಗೆ ಚುನಾವಣಾ ಪಟ್ಟಿ ಲಭ್ಯವಿದ್ದು, ಏಳು ದಿನ ಹೆಚ್ಚುವರಿ ಅವಧಿಯ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು. ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 22 ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಇದನ್ನೂ ಓದಿ : ಬಿಬಿಎಂಪಿ ಮತದಾರರ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಇಂದೇ ಕೊನೇ ದಿನ