ಬೆಂಗಳೂರು: ರಾಜ್ಯದ 17 ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ಗೆಲುವಿನ ಸಂಬಂಧ ಕಾರ್ಯತಂತ್ರ ರೂಪಿಸಲು ಸೋಮವಾರ ಕಾಂಗ್ರೆಸ್ ಪಕ್ಷದ ಮಹತ್ವದ ಸಭೆ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ್, ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ 17 ಶಾಸಕರ ರಾಜೀನಾಮೆ ಹಾಗೂ ಅವರ ಅನರ್ಹತೆಯಿಂದ ತೆರವಾಗಿರುವ ಕ್ಷೇತ್ರಕ್ಕೆ ಸದ್ಯವೇ ಚುನಾವಣೆ ನಡೆಯಲಿದೆ. ಎಲ್ಲಾ 17 ಕ್ಷೇತ್ರ ಗೆಲ್ಲುವ ಸಂಬಂಧ ಯೋಜನೆ ರೂಪಿಸುತ್ತಿದ್ದೇವೆ. ಎಲ್ಲಾ 17 ಕ್ಷೇತ್ರಗಳ ಉಪ ಚುನಾವಣೆ ಪೂರ್ವಭಾವಿ ಚರ್ಚೆ ಸಂಬಂಧ ಕೆಪಿಸಿಸಿ ಈ ಸಭೆ ಹಮ್ಮಿಕೊಂಡಿದೆ. ಸೋಮವಾರ ಬೆಳಗ್ಗೆ ಹನ್ನೊಂದಕ್ಕೆ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯಕಾರಣಿ ಹೆಸರಿನಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದರು.
ಕಾರ್ಯಕಾರಿಣಿ ಸಭೆಗೆ ಎಐಸಿಸಿ ರಾಜ್ಯ ಒಬಿಸಿ ಘಟಕಗಳ ಉಸ್ತುವಾರಿ ಆಗಿರುವ ರೋಷನ್ ರೋಸಯ್ಯ, ಚೆನ್ನೈನಿಂದ ರಾಜು ಆಗಮಿಸಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ರಾಜ್ಯದ 30 ಜಿಲ್ಲೆಯ ಹಾಗೂ 224 ಕ್ಷೇತ್ರಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲಾ 17 ಕ್ಷೇತ್ರಗಳಿಗೂ ಪ್ರತ್ಯೇಕ ಸಮಿತಿಯನ್ನು ರಚಿಸುವ ಕಾರ್ಯ ಆಗಲಿದೆ ಎಂದರು.