ಬೆಂಗಳೂರು: ಸಮಾಜವಾದ ತತ್ವ, ಸಿದ್ಧಾಂತಗಳ ಮೇಲೆ ಒಲವು, ರಾಮ್ ಮನೋಹರ್ ಲೋಹಿಯಾ ಅವರ ತತ್ವಗಳಿಂದ ಪ್ರಭಾವ, ಶಾಲಾ ದಿನಗಳಿಂದಲೇ ಉತ್ತಮ ವಾಗ್ಮಿಯಾಗಿದ್ದವರು ಸಿದ್ದರಾಮಯ್ಯ. ಗಂಭೀರ ಸ್ವಭಾವದವರಾಗಿದ್ದ ಸಿದ್ದರಾಮಯ್ಯನವರು, ಜಾನಪದ ನೃತ್ಯ, ನಾಟಿ ಕೋಳಿ ಸಾಂಬಾರ್ ಎಂದರೆ ತುಂಬಾ ಇಷ್ಟಪಡುತ್ತಿದ್ದರು. ಸಿದ್ದರಾಮಯ್ಯನವರ ಬಾಲ್ಯದ ಜೀವನ ತುಂಬಾ ರೋಚಕ.
ಸಿದ್ದರಾಮಯ್ಯ ಅವರು ಮಾಧ್ಯಮವೊಂದರಲ್ಲಿ ಹೇಳಿಕೊಂಡಂತೆ, ಒಂದರಿಂದ ನಾಲ್ಕನೇ ತರಗತಿ ಓದಲೇ ಇಲ್ಲ. ನೇರವಾಗಿ 5 ನೇ ತರಗತಿಗೆ ದಾಖಲಾಗಿದ್ದರು. ಸಿದ್ದರಾಮಯ್ಯ ಅವರು ಬಾಲ್ಯದಲ್ಲಿ ಶಾಲೆಗೆ ಹೋಗಿಲ್ಲ. ಸಿದ್ದರಾಮಯ್ಯ ಅವರ ತಂದೆ, ಅವರನ್ನು ವೀರ ಮಕ್ಕಳು ಕುಣಿತ ಕಲಿಯಲು ಸೇರಿಸಿದ್ದರು. ಕುಣಿತ ಕಲಿಸುವ ನಂಜೇಗೌಡರು ಎಂಬ ಮೇಷ್ಟ್ರು, ಮಣ್ಣಿನ ಮೇಲೆ ಅಕ್ಷರ ಅಭ್ಯಾಸ ಕಲಿಸಿದ್ದರು. 2 ವರ್ಷದ ನಂತರ ನಂಜೇಗೌಡರು ಕುಣಿತ ಕಲಿಸುವುದು ನಿಲ್ಲಿಸಿದರು. ಆಮೇಲೆ ಒಂದೆರೆಡು ವರ್ಷ ಹುಡುಗರ ಜೊತೆಯಲ್ಲಿ ಎಮ್ಮೆ ಮೇಯಿಸುವುದಕ್ಕೆ ಹೋಗಿದ್ದರು. ನಂತರ ರಾಜಪ್ಪ ಎಂಬ ಹೆಡ್ ಮಾಸ್ಟರ್ ಸಿದ್ದರಾಮಯ್ಯ ಅವರನ್ನು ಶಾಲೆಗೆ ಸೇರಿಸಿದ್ದರಂತೆ. ಸಿದ್ದರಾಮಯ್ಯ ಅವರ ಅಕ್ಷರ ಜ್ಞಾನವನ್ನು ಗಮನಿಸಿದ ಮೇಷ್ಟ್ರು, ನೇರವಾಗಿ ಐದನೇ ಕ್ಲಾಸ್ಗೆ ದಾಖಲಿಸಿದರಂತೆ.
ಸಿದ್ದರಾಮಯ್ಯ ಅವರು ಓದುವುದರಲ್ಲಿ ಸದಾ ಮುಂದಿದ್ದರು. ಯಾವುದೇ ತರಗತಿಯನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಇನ್ನು ಆಟದಲ್ಲೂ ಹೆಚ್ಚು ಆಸಕ್ತಿ ಎಲ್ಲಾ ಕ್ರೀಡೆಯಲ್ಲೂ ಭಾಗವಹಿಸುತ್ತಿದ್ದರು. ಹಾಕಿ, ಕ್ರಿಕೆಟ್, ಕಬ್ಬಡಿ ಹೀಗೆ ಶಾಲಾ ದಿನಗಳಲ್ಲಿ ಕ್ರೀಡಾಸಕ್ತಿ ಬೆಳೆಸಿಕೊಂಡಿದ್ದರು. ಎರಡನೇ ವರ್ಷದ ಎಲ್.ಎಲ್.ಬಿ ಓದುವಾಗ ಪರೀಕ್ಷೆ ಸಮಯದಲ್ಲಿ ಒಂದು ಘಟನೆ ನಡೆದಿತ್ತು. ಎಲ್.ಎಲ್.ಬಿ ಓದುವಾಗ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು ಎಂದು ನಂಬಿ ಮೋಸ ಹೋಗಿದ್ದರಂತೆ.
ಒಮ್ಮೆ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಕರ್ನಾಟಕಕ್ಕೆ ಬಂದಾಗ, ಅವರಿಗೆ ಕಪ್ಪು ಬಾವುಟ ತೋರಿಸಬೇಕೆಂದು ಸ್ನೇಹತರೆಲ್ಲಾ ಸೇರಿ ನಿರ್ಧರಿಸಿ, ತಯಾರಿ ಮಾಡಿಕೊಂಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಸ್ನೇಹಿತರೆಲ್ಲಾ ಕೈಕೊಟ್ಟರಂತೆ. ಕಾಡಯ್ಯ ಮತ್ತು ಸಿದ್ದರಾಮಯ್ಯ ಇಬ್ಬರು ಮಾತ್ರ ಹೆದ್ದಾರಿ ಪ್ರತಿಭಟನೆ ಮಾಡಲು ಮುಂದಾದಾಗ ಪೊಲೀಸರು ಬಂಧಿಸಿ, ಚೆನ್ನಾಗಿ ಒಡೆದು ಕಳುಹಿಸಿದ್ದರಂತೆ. ಅಂದು ಇಂದಿರಾ ಗಾಂಧಿ ಅವರನ್ನು ವಿರೋಧಿಸಲು ಮುಂದಾಗಿದ್ದ ಸಿದ್ದರಾಮಯ್ಯ ಇಂದು ಅವರ ಪಕ್ಷದಿಂದಲೇ 2 ನೇ ಬಾರಿಗೆ ಮುಖ್ಯಮಂತ್ರಿ ಆಗುತ್ತಿದ್ದಾರೆ.
1970ರ ದಶಕದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರಂತೆ ಜನಪ್ರಿಯತೆ, ಇಮೇಜ್ ಬೆಳೆಸಿಕೊಂಡ ಮತ್ತೊಬ್ಬ ರಾಜಕಾರಣಿ ಎಂದರೆ ಅದು ಸಿದ್ದರಾಮಯ್ಯ. ಕರ್ನಾಟಕದ ಎರಡು ಜನಪ್ರಿಯ, ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತ ನಾಯಕರ ಎದುರು ರಾಜಕೀಯ ಪ್ರಭಾವ ಮೆರೆದ ಹಿಂದುಳಿದ ವರ್ಗದ ನಾಯಕರೆಂದರೆ ಸಿದ್ದರಾಮಯ್ಯ ಎಂದರೆ ತಪ್ಪಾಗಲಾರದು.
ನಾಟಿ ಕೋಳಿ ಸಾರು ಇಷ್ಟ: ಸಿದ್ದರಾಮಯ್ಯ ಅವರಿಗೆ ನಾಟಿ ಕೋಳಿ ಸಾರು ಹೆಚ್ಚು ಇಷ್ಟ. ಅನಾರೋಗ್ಯ ಇದ್ದಾಗಲೂ ಆಸ್ಪತ್ರೆಯಲ್ಲಿ ಇದ್ದರೂ ನಾಟಿ ಕೋಳಿ ಸಾರು ತಿಂದು ಸುದ್ದಿಯಾಗಿದ್ದರು. ವಿವಾದವೂ ಸಿದ್ದರಾಮಯ್ಯ ಮೇಲೆ ಬಂತು. ಕಳೆದ ವರ್ಷ ಮಡಿಕೇರಿಯಲ್ಲಿ ನಾಟಿಕೋಳಿ ಸಾಂಬಾರ್ ತಿಂದು ದೇವಾಲಯಕ್ಕೆ ಭೇಟಿ ಕೊಟ್ಟಿರುವ ವಿವಾದವೂ ಅವರ ಮೇಲೆ ಬಂದಿತ್ತು. ಸಿದ್ದರಾಮಯ್ಯನವರಿಗೆ ಪ್ರೀತಿ ಎನ್ನುವ ಕಾರಣಕ್ಕೆ ನಾಟಿ ಕೋಳಿ ಸಾರು, ರಾಗಿ ಮುದ್ದೆ, ಅನ್ನ ತರಕಾರಿ ಸಾಂಬಾರಿನ ವ್ಯವಸ್ಥೆ ಮಾಡಲಾಗಿತ್ತು. ಊಟದ ಬಳಿಕ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು.
ಇದು ವಿವಾದ ಸೃಷ್ಟಿಸುತ್ತಲೇ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ನಾನು ಸಿದ್ದರಾಮಯ್ಯನವರಿಗಾಗಿ ನಾಟಿಕೋಳಿ ಸಾರು ಮಾಡಿಸಿದ್ದು ನಿಜ, ಅದು ಅವರಿಗೆ ತುಂಬಾ ಪ್ರೀತಿ ಎನ್ನುವ ಕಾರಣಕ್ಕೆ ಮಾಡಿಸಿದ್ದೆ. ಆದರೆ ಅವರು ಸೇವನೆ ಮಾಡಲಿಲ್ಲ, ತರಕಾರಿ ಸಾಂಬಾರು ಸೇವಿಸಿ ಹೋಗಿದ್ದರು ಎಂದು ಸ್ಪಷ್ಟನೆ ನೀಡಿದ್ದರು. ಅವತ್ತು ತಿಂದದ್ದು ಅಕ್ಕಿರೊಟ್ಟಿ. ವೀಣಾ ಅಚ್ಚಯ್ಯ ನಾಟಿಕೋಳಿ ಮಾಡಿಕೊಂಡು ಬಂದಿದ್ದು ನಿಜ, ಆದರೆ ನಾನು ಮಾಂಸ ಸೇವನೆ ಮಾಡಿರಲಿಲ್ಲ. ಕೆಲವರು ವಾದ ಮಾಡುತ್ತಿದ್ದಾರೆ, ಅದಕ್ಕೆ ಕೌಂಟರ್ ಕೊಡ್ತಾ ಇದ್ದೇನೆ, ಯಾಕೆ ತಿನ್ನಬಾರದು ಅಂತ ವಾದ ಮಾಡುತ್ತಿದ್ದೇನೆ ಅಷ್ಟೇ ಎಂದು ಸಿದ್ದರಾಮಯ್ಯ ಅವರು ಅಂದು ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: ವಿದ್ಯಾರ್ಥಿ ದೆಸೆಯಿಂದಲೇ ಸಂಘಟನಾ ಚತುರ.. ಬಂಡೆಯಂತೆ ನಿಂತು ಕಾಂಗ್ರೆಸ್ ಗೆಲ್ಲಿಸಿದ ಡಿಕೆಶಿ ರಾಜಕೀಯ ಹಾದಿ