ಬೆಂಗಳೂರು: ಅಬಕಾರಿ ಇಲಾಖೆ ಪರವಾನಗಿ ಶೇ. 50ರಷ್ಟು ನವೀಕರಣ ಶುಲ್ಕ ದಂಡವಿಲ್ಲದೇ ಪಾವತಿಸಿಕೊಳ್ಳುವ ಅವಧಿಯನ್ನು ಜೂನ್ 31ರವರೆಗೆ ವಿಸ್ತರಿಸಿದ್ದು, ಡಿಸೆಂಬರ್ ಅಂತ್ಯಕ್ಕೆ ಶೇ. 100ರಷ್ಟು ನವೀಕರಣದ ಪರವಾನಗಿ ಶುಲ್ಕವನ್ನು ಪಾವತಿಸಿಕೊಳ್ಳಲಾಗುತ್ತದೆ ಎಂದು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಕಂತುಗಳಾಗಿ ಪರವಾನಗಿ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಲು ಅನುಮತಿ ನೀಡಬೇಕೆಂದು ಕರ್ನಾಟಕ ಬ್ರಿವರೀಸ್ ಮತ್ತು ಡಿಸ್ಟಿಲರೀಸ್ ಅಸೋಸಿಯೇಷನ್, ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.
ಮನವಿ ಮಾನ್ಯ ಮಾಡಿರುವ ರಾಜ್ಯ ಸರ್ಕಾರ, ಕೋವಿಡ್ ಎರಡನೇ ಅಲೆಯ ಲಾಕ್ಡೌನ್ನಿಂದ ಬಾರ್, ಪಬ್ಗಳ ಮಾಲೀಕರು ವ್ಯಾಪಾರ-ವಹಿವಾಟು ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವುದನ್ನು ಮನಗಂಡಿದೆ. ಸರ್ಕಾರದ ಸಲಹೆ ಮೇರೆಗೆ ಅರ್ಜಿಗಳೊಂದಿಗೆ ಪರವಾನಗಿ ಪಡೆಯಲು ಶೇ. 50ರಷ್ಟು ಮಾತ್ರ ಶುಲ್ಕ ಈಗ ಪಾವತಿಸಿ ಉಳಿದ 50ರಷ್ಟನ್ನು ಡಿಸೆಂಬರ್ ಅಂತ್ಯದ ವೇಳೆಗೆ ಪಾವತಿಸಲು ಪಬ್ ಮತ್ತು ಬಾರ್ ಮಾಲೀಕರಿಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ಅಬಕಾರಿ ಉಪ ವಿಭಾಗಾಧಿಕಾರಿಗಳಿಗೆ ರಾಜ್ಯ ಅಬಕಾರಿ ಆಯುಕ್ತರು ಅದೇಶದಲ್ಲಿ ತಿಳಿಸಿದ್ದಾರೆ.