ಬೆಂಗಳೂರು : ನಗರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲಿಸಿದ್ದಾರೆ. ಅದರಂತೆ, ಅಬಕಾರಿ ಜಂಟಿ ಆಯುಕ್ತ ಎ.ಎಲ್. ನಾಗೇಶ್ ಕೆಲವೊಂದು ಬಾರ್ ಲೈಸೆನ್ಸ್ ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯ ಮಾರಾಟವನ್ನು ಮಾ. 21ರಿಂದ ಮಾ.31ರವರೆಗೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದ ಆರೋಪದ ಮೇಲೆ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ವಲಯ ವ್ಯಾಪ್ತಿಯ ಪದ್ಮಾ ವೈನ್ಸ್, ವೈಟ್ ಫೀಲ್ಡ್ ವಲಯ ವ್ಯಾಪ್ತಿಯ ಅಶ್ವರ್ಯ ಬಾರ್ ಅಂಡ್ ರೆಸ್ಟೋರೆಂಟ್, ಕೆ.ಆರ್. ಪುರ ವಲಯ ವ್ಯಾಪ್ತಿಯ ಎಸ್.ಎಸ್.ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಬಾಣಸವಾಡಿ ವಲಯ ವ್ಯಾಪ್ತಿಯ ಕವಿತಾ ಗಾರ್ಡನ್ ಬಾರ್ ಅಂಡ್ ರೆಸ್ಟೋರೆಂಟ್ ಗಳ ಸನ್ನದುಗಳನ್ನು ಅಮಾನತು ಮಾಡಿ ಅಬಕಾರಿ ಆಯುಕ್ತರು ಆದೇಶಿಸಿದ್ದಾರೆ. ಇನ್ನು, ವೈಟ್ ಫೀಲ್ಡ್ ಮತ್ತು ಜೀವನ್ ಭೀಮಾ ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.