ಬೆಂಗಳೂರು : SSLC ಪರೀಕ್ಷೆ ವಿದ್ಯಾರ್ಥಿ ಜೀವನ ಪ್ರಮುಖ ಘಟ್ಟಗಳಲ್ಲಿ ಒಂದು. ಈ ವಾರ್ಷಿಕ ಪರೀಕ್ಷೆ ಪಾಸ್ ಮಾಡಲು ವಿದ್ಯಾಥಿರ್ಗಳು ಅವರ ಪೋಷಕರು ಮತ್ತು ಶಿಕ್ಷಕರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಕಾರಣ ಎಸ್ಎಸ್ಎಲ್ಸಿ ಸರ್ಟಿಫಿಕೇಟ್ ವಿದ್ಯಾರ್ಥಿಗಳು ತಾವು ಮುಂದೆ ಆಯ್ದುಕೊಳ್ಳಲು ಬಯಸುವ ಕೋರ್ಸ್ಗಳಿಗೆ ಪ್ರಮುಖವಾಗಿರುತ್ತೆ.
ಈ ಬಾರಿ ಕೋವಿಡ್ ಸಂದಿಗ್ಧತೆಯ ನಡುವೆ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಇದೇ ತಿಂಗಳ 19 ಮತ್ತು 22 ರಂದು ಪರೀಕ್ಷೆ ನಡೆಯಲಿದೆ. ಪ್ರತೀ ವರ್ಷ ಆರು ದಿನಗಳ ಕಾಲ ನಡೆಯುತ್ತಿದ್ದ SSLC ಪರೀಕ್ಷೆ, ಈ ಬಾರಿ ಕೋವಿಡ್ ಕಾರಣದಿಂದ ಎರಡು ದಿನಗಳಲ್ಲಿ ಮುಗಿಯಲಿದೆ. ಈ ಸಲ ವಿಶೇಷವಾಗಿ ರೈಟಿಂಗ್ ಬದಲಿಗೆ ಟಿಕ್ಕಿಂಗ್ ಮೂಲಕ ನಡೆಯಲಿದೆ.
ಹೊಸ ಮಾದರಿ ಪರೀಕ್ಷೆಯಿಂದಾಗಿ ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಗೊಂದಲಗಳು ಇದ್ದೇ ಇರುತ್ತವೆ. ಅಂತಹ ಗೊಂದಲ, ಆತಂಕಗಳನ್ನು ಹೋಗಲಾಡಿಸಲು 'ಈಟಿವಿ ಭಾರತ' ಮೂಲಕ ಶಿಕ್ಷಣ ತಜ್ಞರು ಹಾಗೂ ಮಕ್ಕಳ ತಜ್ಞರು ವಿದ್ಯಾರ್ಥಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ಹೋದಾಗ ಹೆಚ್ಚಿನ ಸಂಖ್ಯೆಯಲ್ಲಿ ಜನ ಇದ್ದೇ ಇರುತ್ತಾರೆ. ಅಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿದರೆ ಯಾವುದೇ ತೊಂದರೆ ಇಲ್ಲ. ಪರೀಕ್ಷಾ ಕೇಂದ್ರದಲ್ಲಿ ಸ್ನೇಹಿತರೊಂದಿಗೆ ಚರ್ಚೆ ಮಾಡುವುದಾಗಲಿ, ಗುಂಪು ಸೇರುವುದಾಗಲಿ ಮಾಡದೇ ಇರುವುದು ಉತ್ತಮ. ಕಡ್ಡಾಯವಾಗಿ ದೈಹಿಕ ಅಂತರ ಕಾಪಾಡುವುದು, ಸಾಧ್ಯವಾದರೆ ಡಬಲ್ ಮಾಸ್ಕ್ ಹಾಕಿಕೊಳ್ಳುವುದು, ಕೈಗಳು ಮುಖಕ್ಕೆ ಹೋಗದಂತೆ ನೋಡಿಕೊಳ್ಳುವುದು, ಸ್ವಚ್ಛತೆ ಕಡೆ ಗಮನಕೊಡಬೇಕಿದೆ.
ಪರೀಕ್ಷಾ ಮಾದರಿ ಅರ್ಥ ಮಾಡಿಕೊಳ್ಳಿ : ಈ ಬಾರಿ ಹೊಸ ಮಾದರಿಯಲ್ಲಿ ಪರೀಕ್ಷೆ ನಡೆಯುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯ ಮಾದರಿಯ ಕುರಿತು ಮೊದಲು ತಿಳಿದುಕೊಳ್ಳಬೇಕು. ಇದು ಪರೀಕ್ಷೆ ಎದುರಿಸಲು ಇರುವ ಸುಲಭ ಮಾರ್ಗಗಳಲ್ಲಿ ಒಂದು ಎಂದು ಅಲೈಯನ್ಸ್ ಯೂನಿವರ್ಸಿಟಿಯ ಸಹ ಕುಲಾಧಿಪತಿ ಅಭಯ್ ಜಿ ಚಬ್ಬಿ ಸಲಹೆ ನೀಡಿದ್ದಾರೆ.
ಕೋವಿಡ್ ಸೋಂಕು ವಿದ್ಯಾರ್ಥಿಗಳ ಮೇಲೆ ಯಾವ ರೀತಿ ಮಾನಸಿಕವಾಗಿ ಪರಿಣಾಮ ಬೀರಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮಾನಸಿಕ ಒತ್ತಡವನ್ನು ಹೇಗೆ ಪಾಸಿಟಿವ್ ಆಗಿ ಬದಲಾಯಿಸಿಕೊಳ್ಳುವುದು ಎಂದು ತಿಳಿಯಬೇಕು. ಪೂರ್ತಿ ಕಲಿಕೆಯ ಸಾಮರ್ಥ್ಯವನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕಾಗುತ್ತದೆ.
ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಒಡನಾಟ ಹೊಂದಿರುವುದರಿಂದ ಅವರಲ್ಲಿ ಆತ್ಮವಿಶ್ವಾಸವನ್ನ ಹೆಚ್ಚಿಸುವ ಕೆಲಸ ಮಾಡಬೇಕು. ಮನೆಯಲ್ಲಿ ಪೋಷಕರು, ಸಂಬಂಧಿಕರು ಸ್ನೇಹಿತರು ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು. ವಿದ್ಯಾರ್ಥಿಗಳು ಯಾವುದೇ ಅಡಚಣೆ ಬಂದರೂ, ಅದರ ಕುರಿತು ಗಮನ ಕೊಡದೆ ಓದುವ ಕಡೆ ಏಕ್ರಾಗತೆ ವಹಿಸಬೇಕು ಎಂದು ತಿಳಿಸಿದ್ದಾರೆ.
ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ : ಬಹು ಆಯ್ಕೆಯ ಪ್ರಶ್ನೆಗಳು ಈ ಬಾರಿ ಹೊಸದೇನಲ್ಲ. ಈ ಹಿಂದೆಯು 40 ಅಂಕ ಇದ್ದವು, ಉಳಿದಂತೆ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯಬೇಕಿತ್ತು. ಆದರೆ, ಈ ಬಾರಿ ಎಲ್ಲವೂ ಬಹು ಆಯ್ಕೆಯ ಪ್ರಶ್ನೆಗಳೇ ಆಗಿರುವುದರಿಂದ ಇನ್ನಷ್ಟು ಸುಲಭವಾಗಿ ಇರಲಿದೆ ಎಂದು ನಾರಾಯಣ ಇ- ಟೆಕ್ನೋ ಸ್ಕೂಲ್ ಪ್ರಾಂಶುಪಾಲ ವಸಂತ್ ಕುಮಾರ್ ತಿಳಿಸಿದ್ದಾರೆ.
ಪರೀಕ್ಷೆ ಶುರುವಾಗುವ ಮುಂಚೆ ಯಾವುದೇ ಗೊಂದಲಗಳು ಇದ್ದರೂ, ಕೊಠಡಿ ಮೇಲ್ವಿಚಾರಕರ ಬಳಿ ಮಾತನಾಡಿನ ಬಗೆಹರಿಸಿಕೊಳ್ಳಿ. ಅವರು ನೀಡುವ ಸೂಚನೆಗಳನ್ನು ಪಾಲಿಸಿ, ಗಾಬರಿ ಪಡುವ ಅಗತ್ಯವಿಲ್ಲ. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದಿದ್ದಾರೆ.