ಬೆಂಗಳೂರು : ಕೊರೊನಾ ಸಂಬಂಧ ಹೊರಡಿಸಿರುವ ಗೈಡ್ಲೈನ್ ಪಾಲನೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಉಲ್ಲಂಘನೆ ಮಾಡಿದ್ದು, ಅವರು ರಾಜ್ಯದ ಜನತೆ ಕ್ಷಮೆಯಾಚಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಸರ್ಕಾರದ ಪ್ರತಿನಿಧಿಯಾಗಿದ್ದಾರೆ. ಚಿತ್ರದುರ್ಗದ ವೇದಾವತಿ ನದಿಗೆ ಬಾಗಿನ ಅರ್ಪಿಸಿಸುವ ವೇಳೆ ಸಾವಿರಾರು ಮಂದಿ ಸೇರಿದ್ದಾರೆ. ಈ ಮೂಲಕ ಶ್ರೀರಾಮುಲು ಸಂಪೂರ್ಣ ಕಾನೂನು ಉಲ್ಲಂಘಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಿ ಶ್ರೀರಾಮುಲುಗೆ ಹೂವಿನ ಮಳೆ.. ಸಾಮಾಜಿಕ ಅಂತರ ಮರೆತೇಬಿಟ್ಟರಾ ಹೆಲ್ತ್ ಮಿನಿಸ್ಟರ್..?
ಶ್ರೀರಾಮುಲು ಅವರಿಗೆ ಬದ್ಧತೆಯಿದ್ದರೆ ಕ್ಷಮೆಯಾಚಿಸಬೇಕು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಇಲ್ಲವೆ ಸಿಎಂ ರಾಜೀನಾಮೆಯನ್ನು ಪಡೆಯಬೇಕು ಎಂದು ಒತ್ತಾಯಿಸಿದರು. ಸಾಮಾನ್ಯ ಜನ ಮದುವೆ ಮಾಡಿದರೆ ಕೇಸ್ ಹಾಕುತ್ತಾರೆ. ಊರಿಗೆ ಯಾರಾದರೂ ಹೋದರೆ ಕ್ವಾರಂಟೈನ್ ಮಾಡುತ್ತಾರೆ. ಮಾಜಿ ಸಿಎಂ ಅವರು ಮದುವೆ ಮಾಡಿದರೆ ಹೆಚ್ಚು ಜನ ಸೇರಿದ್ದರು ಎಂದು ಕೇಸ್ ಹಾಕಿದ್ದಾರೆ. ಆದರೆ, ಸಚಿವ ಶ್ರೀರಾಮುಲು ಅವರು ಈ ರೀತಿ ವರ್ತಿಸಿದರೆ ಯಾವುದೇ ಕೇಸ್ ಇಲ್ಲ.
ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆಯೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಮಾರ್ಚ್ 9ರಂದು ಒಂದೇ ಒಂದು ಕೊರೊನಾ ಕೇಸ್ ಪತ್ತೆಯಾಗಿತ್ತು. ಆದರೆ, ಈಗ ಮೂರುವರೆ ಸಾವಿರ ಕೇಸ್ ರಾಜ್ಯದಲ್ಲಿ ಪತ್ತೆಯಾಗಿವೆ. ಇಷ್ಟು ಕೇಸ್ ಹೇಗೆ ಬಂತು? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಸಹ ಪ್ರಾರಂಭವಾಗಿದೆ. ಆದರೆ, ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸಿಗುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸರಿಯಾಗಿ ಬಿತ್ತನೆ ಬೀಜ, ಗೊಬ್ಬರ ಪೂರೈಸುತ್ತಿಲ್ಲ ಎಂದು ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.