ಬೆಂಗಳೂರು : ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ತಮಗೆ ಜಾತಿ ಕಾರಣಕ್ಕೆ ನಾಗಪುರದ ಡಾ. ಹೆಡಗೇವಾರ್ ಸ್ಮಾರಕ ಕಟ್ಟಡದಲ್ಲಿ ಪ್ರವೇಶ ನಿರಾಕರಿಸಲಾಯಿತು ಎಂದು ಆರೋಪಿಸಿದ್ದಾರೆ. ನಾಗಪುರದಲ್ಲಿ ಸಂಘ ಕಾರ್ಯಾಲಯವನ್ನು ನೋಡಲು ಬಂದವರ ಹೆಸರನ್ನು ನೋಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ. ಇದೊಂದು ನಿರಾಧಾರದ ಹಾಗೂ ಹುರುಳಿಲ್ಲದ ಆರೋಪ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯವಾಹಕ ನಾ. ತಿಪ್ಪೇಸ್ವಾಮಿ ಅವರು ಪ್ರತಿಕ್ರಿಯಸಿದ್ದಾರೆ.
ರಾಷ್ಟೀಯ ಸ್ವಯಂ ಸೇವಕ ಸಂಘ (ಕರ್ನಾಟಕ)ದ ವತಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಆರ್.ಎಸ್.ಎಸ್ ನ ಯಾವುದೇ ಕಚೇರಿಯಲ್ಲಾಗಲಿ, ಅಥವಾ ಈ ರೀತಿಯ ಸ್ಮಾರಕ ಕಟ್ಟಡಗಳಲ್ಲಾಗಲಿ, ಎಲ್ಲರಿಗೂ ಮುಕ್ತ ಪ್ರವೇಶವಿದೆ. ಎಲ್ಲಾ ಜಾತಿ, ವರ್ಗದ ಸಾವಿರಾರು ಜನ ನಿತ್ಯ ಬಂದು ಹೋಗುತ್ತಲೇ ಇದ್ದಾರೆ. ಯಾರಿಗೂ ಪ್ರವೇಶ ನಿರಾಕರಣೆಯ ಪ್ರಶ್ನೆಯೇ ಬಂದಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಲ್ಲರನ್ನೂ ಸದಾ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಮೊದಲು ಈ ಘಟನೆ ನಡೆದಿತ್ತು ಎನ್ನುವ ಶ್ರೀ ಗೂಳಿಹಟ್ಟಿ ಶೇಖರ್ ಅವರು, ಆನಂತರ ಅನೇಕ ಸಂಘದ ಪ್ರಮುಖರನ್ನು ಭೇಟಿಯಾದರೂ ಎಲ್ಲಿಯೂ ತಮಗಾದ ಈ ಅವಮಾನದ ಬಗ್ಗೆ ಹೇಳಿಲ್ಲ. ಈಗ ಹತ್ತು ತಿಂಗಳ ನಂತರ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯಕರವಾಗಿದೆ ಎಂದು ತಿಪ್ಪೇಸ್ವಾಮಿ ಹೇಳಿಕೆ ನೀಡಿದ್ದಾರೆ.
ಜೀ.. ಹುಜೂರ್ ಎಂದಷ್ಟೇ ಹೇಳಬೇಕು- ಸಿದ್ದರಾಮಯ್ಯ ಲೇವಡಿ : ಶೂದ್ರರು ಮತ್ತು ದಲಿತರಿಗೆ ಆರ್ಎಸ್ಎಸ್ ಗರ್ಭಗುಡಿಗೆ ಪ್ರವೇಶ ಇಲ್ಲ, ಅವರೇನಿದ್ದರೂ ಹೊರಬಾಗಿಲಲ್ಲಿ ನಿಂತು 'ಜೀ.. ಹುಜೂರ್' ಎಂದಷ್ಟೇ ಹೇಳಬೇಕು. ಇದಕ್ಕೆ ಬಿಜೆಪಿಯ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಿ ಎಲ್ ಸಂತೋಷ್ ಅವರಿಗೆ ಕಳುಹಿಸಿರುವ ವಾಟ್ಸಾಪ್ ವಾಯ್ಸ್ ರೆಕಾರ್ಡ್ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಬಿಜೆಪಿ ಮತ್ತು ಆರ್ಎಸ್ಎಸ್ ಪರಿವಾರ ಬಹಿರಂಗವಾಗಿ ಮುಸ್ಲಿಂಮರ ವಿರುದ್ಧ ಮಾತ್ರ ಹರಿಹಾಯ್ದರೂ ಅಂತರಂಗದಲ್ಲಿ ಅದು ಶೂದ್ರರು ಮತ್ತು ದಲಿತರ ವಿರುದ್ಧವಾಗಿದೆ. ಬಾಯಿಯಲ್ಲಿ ಹಿಂದೂ ನಾವೆಲ್ಲರೂ ಒಂದು ಎನ್ನುವ ಮಂತ್ರವನ್ನು ಸದಾ ಪಠಿಸುವ ಸಂಘ ಪರಿವಾರದ ನಾಯಕರು, ಶೂದ್ರರು ಮತ್ತು ದಲಿತರನ್ನು ಬಡಿಯಲು ಕಂಕುಳಲ್ಲಿ ಬಡಿಗೆ ಇಟ್ಟುಕೊಂಡಿರುತ್ತಾರೆ ಎಂದು ಸಿಎಂ ಆರೋಪಿಸಿದ್ದಾರೆ.
ಗೂಳಿಹಟ್ಟಿ ಶೇಖರ್ ಅವರಂತಹ ದಲಿತ ಸಮುದಾಯದ ನಾಯಕರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆ ಮತ್ತು ಸಂವಿಧಾನ ಮಾತ್ರ ರಕ್ಷಣೆ ನೀಡಬಹುದೇ ಹೊರತು, ಸಂಘ ಪರಿವಾರದ ಸಾವರ್ಕರ್, ಗೋಲ್ವಾಲ್ಕರ್ ಚಿಂತನೆಗಳಲ್ಲ. ಶೇಖರ್ ಅವರು ತನ್ನ ಅನುಭವದಿಂದ ಪಾಠ ಕಲಿಯಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ ಗರ್ಭಗುಡಿಯ ಹೊರಬಾಗಿಲಲ್ಲಿ ನಿಂತು ಜೀ.. ಹುಜೂರು ಎಂದಷ್ಟೇ ಹೇಳಬೇಕು: ಸಿಎಂ ಲೇವಡಿ