ಬೆಂಗಳೂರು: ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವ ಸಿ.ಎಂ. ಇಬ್ರಾಹಿಂ ಮನವೊಲಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಫೆ.14ರಂದು ರಾಜೀನಾಮೆ ನೀಡುತ್ತೇನೆ. ಶೀಘ್ರದಲ್ಲೇ ದಿನಾಂಕ ಘೋಷಣೆ ಮಾಡುವುದಾಗಿ ಪರೋಕ್ಷವಾಗಿ ಜೆಡಿಎಸ್ ಸೇರುವ ಸಂಕೇತ ನೀಡಿರುವ ಸಿ.ಎಂ. ಇಬ್ರಾಹಿಂ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನವನ್ನು ಸಿದ್ದರಾಮಯ್ಯ ಮುಂದುವರೆಸಿದ್ದಾರೆ.
ಸಿದ್ದರಾಮಯ್ಯ ತಮ್ಮ ಆಪ್ತ ಎಚ್.ಸಿ.ಮಹದೇವಪ್ಪ ಮೂಲಕ ಸಂಧಾನ ಪ್ರಯತ್ನ ನಡೆಸಿದ್ದಾರೆ. ಸೋಮವಾರ ಇಬ್ರಾಹಿಂ ಅವರ ಮನೆಗೆ ಭೇಟಿ ನೀಡಿದ ಮಹದೇವಪ್ಪ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಸಂದೇಶವನ್ನು ಇಬ್ರಾಹಿಂಗೆ ತಲುಪಿಸಿದ್ದಾರೆ. ಕಾಂಗ್ರೆಸ್ ಪಕ್ಷ ಬಿಡಬೇಡಿ, ಮುಂದೆ ಸ್ಥಾನಮಾನ ಸಿಗುತ್ತದೆ ಎಂದು ಸಿ.ಎಂ. ಇಬ್ರಾಹಿಂಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ರಾಹಿಂಗೆ ಸಿದ್ದರಾಮಯ್ಯ ಕರೆ: ಕುಪಿತರಾಗಿರುವ ಸಿ.ಎಂ. ಇಬ್ರಾಹಿಂಗೆ ಸಿದ್ದರಾಮಯ್ಯ ಕರೆ ಮಾಡಿ ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪಕ್ಷ ಬಿಡಬೇಡ ಮುಂದೆ ನಿನಗೆ ಸ್ಥಾನಮಾನ ಕೊಡೋಣ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಜೊತೆ ಮಾತನಾಡಿದ್ದಾರೆಂದು ನನ್ನ ಬಳಿ ಮಹದೇವಪ್ಪ ಹೇಳಿದ್ದಾರೆ. ಎಲ್ಲರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಮಹದೇವಪ್ಪನಿಗೆ ಇಬ್ರಾಹಿಂ ಹೇಳಿದ್ದಾನೆ. ನಾನು ಕೂಡ ಮಾತನಾಡುತ್ತೇನೆ. ಫೋನ್ನಲ್ಲಿ ಅಷ್ಟೇ ಅಲ್ಲ, ಮನೆಗೂ ಹೋಗಿ ಮಾತನಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಸರ್.. ಇವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಿ : ಸಿದ್ದರಾಮಯ್ಯಗೆ ವೈಎಸ್‌ವಿ ದತ್ತ ಬೆಂಬಲಿಗರ ಮನವಿ!