ಬೆಂಗಳೂರು : ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡ್ತಾರೆ ಅಂತ ನಾನು ಮೊದಲೇ ಹೇಳಿದ್ದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಶಿವಾನಂದ ವೃತ್ತದ ಬಳಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾನು ಹೇಳಿದಾಗ ಯಾರು ನಂಬಿರಲಿಲ್ಲ, ಈಗ ಆ ಕಾಲ ಸನ್ನಿಹಿತವಾಗಿದೆ. ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾಗಬೇಕು. ಯಡಿಯೂರಪ್ಪ ಬದಲಾವಣೆಯಿಂದ ಕಾಂಗ್ರೆಸ್ಗೆ ಪ್ಲಸ್ ಮೈನಸ್ ಮುಖ್ಯ ಅಲ್ಲ. ಒಬ್ಬ ಭ್ರಷ್ಟ ಸಿಎಂ ಹೋಗ್ತಿದ್ದಾರೆ ಅನ್ನೋದು ಮುಖ್ಯ ಎಂದರು.
ಸಿಎಂ ಬದಲಾಗ್ತಾರೆ ಎಂಬ ನಳಿನ್ ಕುಮಾರ್ ಕಟೀಲ್ ಆಡಿಯೋ ಬಹಿರಂಗ ವಿಚಾರವಾಗಿ ಮಾತನಾಡಿ, ಹೈಕಮಾಂಡ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕಟೀಲ್ ಹೇಳಿಕೊಂಡಿರಬಹುದು. ಶೆಟ್ಟರ್ ಮತ್ತು ಈಶ್ವರಪ್ಪ ಅವರನ್ನು ಬದಲಾವಣೆ ಮಾಡುವ ಬಗ್ಗೆಯೂ ಕಟೀಲ್ ಆಡಿಯೋದಲ್ಲಿ ಹೇಳಿದ್ದಾರೆ.
ಸಿಎಂ ಬದಲಾದ ಮೇಲೆ ಕೆಲವು ಸಚಿವರ ಬದಲಾವಣೆ ಕೂಡ ಆಗಬಹುದು. ಆದರೆ, ಅದು ತಾವು ಹೇಳಿದ್ದಲ್ಲ, ಆಡಿಯೋ ನನ್ನದಲ್ಲ ಅಂತ ಕಟೀಲ್ ಹೇಳಿಕೊಂಡಿದ್ದಾರೆ. ಆಡಿಯೋ ಬಗ್ಗೆ ತನಿಖೆ ನಡೆಸಲು ಸಿಎಂಗೆ ಮನವಿ ಮಾಡುವುದಾಗಿ ಹೇಳಿದ್ದಾರೆ ಎಂದು ಹೇಳಿದರು.
ಓದಿ : ಕಟೀಲ್ ಬೆಂಬಲಕ್ಕೆ ನಿಂತ ಕೇಸರಿ ನಾಯಕರು: ಆಡಿಯೋ ವೈರಲ್ ತನಿಖೆಯತ್ತ ಬಿಜೆಪಿ ಚಿತ್ತ
ಅವಧಿಗೂ ಮೊದಲೇ ಚುನಾವಣೆ ಬರಲಿದೆ ಅಂತ ನನಗೆ ಅನಿಸುತ್ತಿಲ್ಲ. ಸಿಎಂ ಬದಲಾದರೂ, ಮೊದಲೇ ಚುನಾವಣೆಯ ನಡೆಯುವ ಸಾಧ್ಯತೆ ಇಲ್ಲ. ಒಂದು ವೇಳೆ ಚುನಾವಣೆ ಬಂದರೆ, ಎದುರಿಸಲು ಕಾಂಗ್ರೆಸ್ ಸಿದ್ಧವಿದೆ. ಯಾವ ಸಮಯದಲ್ಲಿ ಚುನಾವಣೆ ಬಂದರೂ ಕಾಂಗ್ರೆಸ್ ಎದುರಿಸಲು ಸನ್ನದ್ದವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿ, ನಾನು ದೆಹಲಿಗೆ ತೆರಳುವುದು ಯಾವ ಕಾರಣಕ್ಕೆಂದು ನಿಮಗೆ ಹೇಳಲು ಆಗುತ್ತಾ? ನನಗೂ ಅದರ ಬಗ್ಗೆ ಗೊತ್ತಿಲ್ಲ. ನಮ್ಮ ವರಿಷ್ಠರು ರಾಹುಲ್ ಗಾಂಧಿ ಕರೆದಿದ್ದಾರೆ, ಹೋಗುತ್ತಿದ್ದೇನೆ. ಪದಾಧಿಕಾರಿಗಳ ನೇಮಕ ವಿಚಾರ ಅಂತ ನಿಮಗೆ ಹೇಳಿದ್ದಾರಾ? ಯಾವ ವಿಚಾರಕ್ಕೆ ಕರೆದಿದ್ದಾರೆ ಅನ್ನೋದು ಯಾರಿಗೆ ಗೊತ್ತು. ಸುಮ್ಮನೆ ಊಹಾಪೋಹ ಮಾಡಬೇಡಿ ಎಂದರು.