ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮೊದಲಿನಿಂದಲೂ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ಹಿಂದೆ ಮಳೆ ಬಂದಾಗ ಬಿಹಾರಕ್ಕೆ ಹೋದ್ರು. ಆದರೆ, ಕರ್ನಾಟಕಕ್ಕೆ ಬರಲಿಲ್ಲ. ಕರ್ನಾಟಕದಲ್ಲಿಯೂ ಪ್ರವಾಹ ಉಂಟಾಗಿದೆ. ಈ ಬಗ್ಗೆ ನಿನ್ನೆ ಒಂದು ಟ್ವೀಟ್ ಮಾಡಿದ್ದಾರೆ. ಅವರ ಈ ಒಂದು ಟ್ವೀಟ್ನಿಂದ ಕನ್ನಡಿಗರಿಗೆ ನ್ಯಾಯ ಸಿಗ್ತದಾ? ಪ್ರವಾಹದಿಂದ ಸುಮಾರು 10 ಸಾವಿರ ಕೋಟಿ ಈ ಭಾರಿ ನಷ್ಟವಾಗಿದೆ. 200 ಕೋಟಿ ನಷ್ಟ ಅಂತ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳುತ್ತಿದ್ದಾರೆ. ಪಾಪ ಅವರಗೆ ನಷ್ಟದ ಬಗ್ಗೆ ಗೊತ್ತಿಲ್ಲ ಅಂತ ಕಾಣಿಸುತ್ತದೆ ಎಂದು ಕಾರಜೋಳ ಹೇಳಿಕೆಗೆ ತಿರುಗೇಟು ಕೊಟ್ಟರು.
ಪತ್ರಕ್ಕೆ ಸಿಎಂ ಉತ್ತರ ಇಲ್ಲ:
ರಾಜ್ಯದ ಸಮಸ್ಯೆ ಕುರಿತು ನಾನು ಮುಖ್ಯಮಂತ್ರಿಗೆ ಹಲವು ಬಾರಿ ಪತ್ರ ಬರೆದಿದ್ದೇನೆ. ಈವರೆಗೂ ಯಾವುದೇ ಉತ್ತರ ಬಂದಿಲ್ಲ. ಪರಿಹಾರದ ಬಗ್ಗೆ ಕೇಳಿದ ಪ್ರಶ್ನೆಗೆ ಇನ್ನೂ ಉತ್ತರ ಕೊಟ್ಟಿಲ್ಲ. ಈ ಭಾರಿಯ ಪ್ರವಾಹದಿಂದ ಸುಮಾರು 10 ರಿಂದ 15 ಸಾವಿರ ಕೋಟಿ ನಷ್ಟವಾಗಿದೆ ಎಂದು ಪತ್ರ ಬರೆದು ಕಳಿಸಿದ್ದೇನೆ. ಆದರೆ, ಇನ್ನೂ ಉತ್ತರ ಬಂದಿಲ್ಲ. ಇವರದು ದಪ್ಪ ಚರ್ಮದ ಸರ್ಕಾರ. ದುಡ್ಡು ಮಾಡೋದರಲ್ಲೇ ಅವರು ಬ್ಯುಸಿಯಾಗಿದ್ದಾರೆ. ಅವರಿಗೆ ಚುನಾವಣೆ ಮುಖ್ಯವಾಗಿದೆ. ಅವರಿಗೆ ಪ್ರವಾಹ ಸಂತ್ರಸ್ತರ ಸಮಸ್ಯೆ ಬೇಕಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು.
ನಾನು ಕೇಂದ್ರದ ಪರಿಹಾರಕ್ಕೂ ಒತ್ತಾಯಿಸಿದ್ದೆ. ವಿಜಯಪುರದಲ್ಲಿ ಮಳೆ ಬಂದಿದೆ. ಆದರೆ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಲ್ಲಿಗೆ ತೆರಳುವ ಬದಲು ಇಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಜಿಲ್ಲಾ ಮಂತ್ರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಜನರಿಗೆ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ರಾಜ್ಯದ 25 ಸಂಸದರಿಗೆ ಧಮ್ ಇಲ್ಲ ಎಂದು ನಾನು ಅನೇಕ ಸಲ ಹೇಳಿದ್ದೇನೆ. ಅವರು ಯಾವತ್ತು ಪ್ರಧಾನಿ ಮುಂದೆ ಬೇಡಿಕೆ ಇಟ್ಟಿದ್ದಾರೆ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 15ನೇ ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಯ್ತು. ಜಿಎಸ್ಟಿ ಪರಿಹಾರವನ್ನೂ ಕೇಳಲಿಲ್ಲ. ನೆರೆ ಪರಿಹಾರವನ್ನೂ ಅವರು ಕೇಳ್ತಿಲ್ಲ. ಚೀಫ್ ಮಿನಿಸ್ಟರ್ಗೂ ಧೈರ್ಯವಿಲ್ಲ. ರಾಜ್ಯದ ಸಂಸದರಿಗೆ ಮೊದಲೇ ಧೈರ್ಯವಿಲ್ಲ. ಪ್ರಧಾನಿ ಕನ್ನಡದಲ್ಲಿ ಟ್ವೀಟ್ ಮಾಡಿ ಬಿಟ್ರೆ ಆಯ್ತಾ? ಕನ್ನಡಿಗರಿಗೆ ನ್ಯಾಯ ಸಿಗ್ತದಾ? ನಾನೂ ಬೇರೆ ಭಾಷೆಯಲ್ಲಿ ಟ್ವೀಟ್ ಮಾಡುವೆ. ಮೊದಲು ನೆರೆ ಪರಿಹಾರ ಕೊಡೋಕೆ ಹೇಳಿ ಎಂದು ಪ್ರಧಾನಿ ಟ್ವೀಟ್ಗೆ ತಿರುಗೇಟು ನೀಡಿದರು.
ಬಾದಾಮಿ ಸೇರಿದಂತೆ ಉತ್ತರಕರ್ನಾಟಕದಲ್ಲಿ ನೆರೆ ಹೆಚ್ಚಾಗಿದೆ. ನಾನು ಅಲ್ಲಿಗೆ ಭೇಟಿ ನೀಡ್ತೇನೆ. ಸುಮಾರು 12 ಜಿಲ್ಲೆಗಳಲ್ಲಿ ಮಳೆಯಾಗಿದೆ. ರೆವಿನ್ಯೂ ಮಿನಿಸ್ಟರ್ ಕಾಟಾಚಾರಕ್ಕೆ ಹೋಗಿದ್ದಾರೆ. ಆಗಸ್ಟ್ನಲ್ಲಿ ಬಂದ ನೆರೆಗೆ ಇನ್ನೂ ಪರಿಹಾರ ಬಂದಿಲ್ಲ. ಸಿಎಂ ಅಲ್ಲಿಗೆ ಹೋಗಿಯೂ ಇಲ್ಲ. ಸಚಿವರು ಅಲ್ಲೇ ಇದ್ದು ಪರಿಸ್ಥಿತಿ ನೋಡಿಕೊಳ್ಳಬೇಕು. ಜನ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಕೇಂದ್ರ ಸರ್ಕಾರವೂ ಏನೂ ಪರಿಹಾರ ನೀಡಿಲ್ಲ ಎಂದರು.
ಡಿ.ಜೆ.ಹಳ್ಳಿ ಘಟನೆ ಪ್ರಸ್ತಾಪ ವಿಚಾರ ವಿವರಿಸಿ, ಈ ಗೋಲಿಬಾರ್ನಲ್ಲಿ ನಾಲ್ವರು ಸತ್ರು, ಮಂಗಳೂರಿನಲ್ಲಿ ಇಬ್ಬರು ಸತ್ರು, ಹಾವೇರಿಯಲ್ಲಿ ಅಮಾಯಕ ರೈತರು ಸತ್ರು, ಈ ಎಲ್ಲ ಅಮಾಯಕರ ಮೇಲೆ ಗೋಲಿಬಾರ್ ಮಾಡಿಸಿದ್ದು ಯಾರು? ಪ್ರವಾಹದಿಂದ ನೂರಾರು ಜನ ಸಾಯುತ್ತಿದ್ದಾರೆ. ಅದನ್ನ ಮಾಡಿದ್ದು ಯಾರು? ಅವರೇ ಅಲ್ವೇ? ಎಂದು ಪ್ರಶ್ನಿಸದ ಅವರು, ಡಿಜೆಹಳ್ಳಿ ಘಟನೆಯನ್ನು ಬಿಜೆಪಿ ಉಪಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಟಾಂಗ್ ಕೊಟ್ಟರು.
ಮಾಜಿ ಮೇಯರ್ ಸಂಪತ್ ರಾಜ್ ಬಗ್ಗೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿರಬಹುದು. ಅವರು ಹೇಳಿದ್ದು ಅಡ್ಮಿಟ್ ಮಾಡಿಕೊಳ್ತಾರೆ. ಆದರೆ, ಸಂಪೂರ್ಣ ತನಿಖೆ ನಡೆಯಬೇಕಲ್ವಾ? ಚಾರ್ಜ್ ಶೀಟ್ ನಾನಿನ್ನೂ ನೋಡಿಲ್ಲ. ಚಾರ್ಜ್ ಶೀಟ್ ನೋಡಿದ ಮೇಲೆ ಮಾತನಾಡ್ತೇನೆ. ಅಖಂಡ ಶ್ರೀನಿವಾಸ್ ಉಚ್ಛಾಟನೆ ಬಗ್ಗೆ ಹೇಳಿಲ್ಲ. ನನ್ನನ್ನ ಭೇಟಿ ಮಾಡಿದಾಗಲೂ ಮಾತನಾಡಿಲ್ಲ. ಈ ಗಲಭೆ ಬಗ್ಗೆ 80 ಪ್ರಕರಣ ಹಾಕಿದ್ದಾರೆ. ಈಗ ಅವರು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಚಾರ್ಜ್ ಶೀಟೇ ಅಂತಿಮವಲ್ಲ. ಈ ಬಗ್ಗೆ ಶ್ರೀನಿವಾಸ್ ಮೂರ್ತಿ ಜೊತೆ ಕುಳಿತು ಮಾತನಾಡುವುದಾಗಿ ತಿಳಿಸಿದರು.
ಶಿರಾದಲ್ಲಿ ವಿಜಯೇಂದ್ರ ವಾಸ್ತವ್ಯ ವಿಚಾರ ಮಾತನಾಡಿ, ವಿಜಯೇಂದ್ರನ ಜೊತೆ ಯಡಿಯೂರಪ್ಪನೂ ಹೋಗಲಿ, ನಮಗೇನು ಭಯನಾ? ಅಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲೋದು. ನಿನ್ನೆ ಬಿಜೆಪಿ ಮೆರವಣಿಗೆ ಮಾಡಿ ಹೋಗಿದ್ದಾರೆ. ಅದು ಕೊರೊನಾಕ್ಕೆ ಕಾರಣವಾಗಲ್ವೇ? ಕೇವಲ ಕಾಂಗ್ರೆಸ್ನವರು ತಪ್ಪು ಮಾಡಿದ್ದಾರೆ ಅಂದ್ರೆ ಹೇಗೆ? ಇದನ್ನೆಲ್ಲ ಮಾಡಿ ಸಾಮಾನ್ಯ ಜನರಿಗೆ ಸಾಮಾಜಿಕ ಅಂತರದ ಬಗ್ಗೆ ಹೇಳೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ತಮ್ಮನ್ನು ಕುಗ್ಗಿಸಬೇಕು ಎನ್ನುವುದು ಅವರ ತಂತ್ರ. ಹಾಗಾಗಿ ನಿಯಮ ಮೀರಿದ್ದಾರೆ ಎಂದು ತಮ್ಮ ಕಾರು ಚಾಲಕನ ವಿರುದ್ಧ 11.15ಕ್ಕೆ ದೂರು ದಾಖಲಿಸಿದ್ದಾರೆ. ನಾವು ಅಲ್ಲಿಗೆ ಹೋಗಿದ್ದೇ 11.45 ಕ್ಕೆ. ಮೊದಲೇ ಹೇಗೆ ನಮ್ಮವರ ಮೇಲೆ ದೂರು ಹಾಕ್ತಾರೆ? ಪಾಪ ಹೆಣ್ಣು ಮಗಳನ್ನ ಹೆದರಿಸೋಕೆ ದೂರು ಹಾಕಿದ್ದಾರೆ. ಪೊಲೀಸರನ್ನ ಸರ್ಕಾರ ದುರ್ಬಳಕೆ ಮಾಡಿಕೊಳ್ತಿದೆ. ನಾವು ಗೇಟ್ ತಳ್ಳಿದ್ದೇವೆ ಅಂದಿದ್ದು ತಪ್ಪು. ಸಬ್ಇನ್ಸ್ಪೆಕ್ಟರ್ ಅವರೇ ಕುಳಿತುಕೊಳ್ಳಿ ಎಂದು ಬಿಟ್ಟಿದ್ದು. ನಾವು ಹೋಗಿದ್ದೇ ಬೇರೆ ಟೈಂ, ಇವರು ದೂರು ದಾಖಲಿಸಿದ್ದೇ ಬೇರೆ ಟೈಂ. ಬೇಕು ಅಂತಾನೇ ಈ ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿ ಅಂತ ಕೇಸ್ ಹಾಕಿದ್ದಾರೆ. ಹಾಗಾದರೆ ನಾನು ಅಪರಿಚಿತ ವ್ಯಕ್ತಿಯಾ? ನಾನು ಯಾರು ಅನ್ನೋದು ಗೊತ್ತಿಲ್ವಾ? ಡಿಜಿಪಿ ಜೊತೆಯೂ ನಾನು ಮಾತನಾಡಿದ್ದೇನೆ. ಕಾನೂನು ಪಾಲನೆ ಮಾಡದಿದ್ದರೆ ಕೆಲಸ ಯಾಕೆ ಮಾಡ್ತೀಯಾ ಅಂದಿದ್ದೇನೆ. ಇನ್ಸ್ಪೆಕ್ಟರ್ ಮೇಲೆ ಕ್ರಮ ತೆಗೆದುಕೊಳ್ತೇನೆ ಅಂದಿದ್ದಾರೆ ಎಂದರು.