ಬೆಂಗಳೂರು: ಎರಡು ವರ್ಷಗಳಿಂದ ಅವರೇ ಅಧಿಕಾರದಲ್ಲಿದ್ದರೂ, ಈಗ ಮಸ್ಕಿಯಲ್ಲಿ ಅಭಿವೃದ್ಧಿಗಾಗಿ ಮತ ನೀಡಿ ಎನ್ನುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಸ್ಕಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಅಧಿಕಾರ ಕೊಡಿ ಎಂದು ಬಿಜೆಪಿಯವರು ಹೇಳಿದ್ದಾರೆ. ಈಗಾಗಲೇ ಇವರು ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ನಾನು ಅಧಿಕಾರದಲ್ಲಿದ್ದಾಗ ಮಸ್ಕಿ ಕ್ಷೇತ್ರಕ್ಕೆ 500 ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದೆ. ಎರಡು ವರ್ಷದಲ್ಲಿ ಕೆಲಸ ಮಾಡಿಸಿದ್ದೇನೆ ಎಂದರು.
ಮಸ್ಕಿ ಬಿಜೆಪಿ ಅಭ್ಯರ್ಥಿ ಅಧಿಕಾರ ತ್ಯಾಗ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜನರಿಗಾಗಿ ಅವರು ಅಧಿಕಾರ ತ್ಯಾಗ ಮಾಡಿಲ್ಲ, ಬಿಜೆಪಿ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದ್ದಾರೆ. ಹೋದ ಕಡೆ ಗ್ರಾಮಗಳನ್ನ ದತ್ತು ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದಾರೆ. ಶಿರಾದಲ್ಲಿ ಮಗದೂರು ಕೆರೆ ತೋಡಿ, ಈಗ ಬತ್ತಿ ಹೋಗಿದೆ. ಇದರಿಂದ ನಷ್ಟ ನಮಗಲ್ಲ, ಜನರಿಗೆ ಆಗೋದು ಎಂದರು.
ಓದಿ : 'ಬಾಂಬೆ ತಂಡ'ದ ಸದಸ್ಯರ ಕ್ಷೇತ್ರಗಳು ಅಭಿವೃದ್ಧಿಯಾದವೇ?; ಎಚ್ಡಿಕೆ ವಾಗ್ದಾಳಿ
ಸಮ್ಮಿಶ್ರ ಸರ್ಕಾರ ಬೀಳಿಸಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅಸಮಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ಡಿಕೆ, ವಿಶ್ವನಾಥ್ ಮಾತ್ರವಲ್ಲ, ಮಂತ್ರಿ ಆಗಿರುವವರನ್ನೂ ಈ ಬಗ್ಗೆ ಕೇಳಿದ್ರೆ, ಬಿಜೆಪಿ ಮಾಡಿದ್ದು ಸರಿಯಲ್ಲ ಎಂದು ಹೇಳ್ತಾರೆ. ಕೋವಿಡ್ ವಿಷಯದಲ್ಲಿ ಆಟ ಆಡಬೇಡಿ. ನಿಮಗೆ ಇಷ್ಟ ಬಂದ ಗೈಡ್ ಲೈನ್ಸ್ ತಂದು ಜನರ ಜೊತೆ ಆಡಬೇಡಿ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ಮಾತನಾಡಿ, ಎಸಿಬಿ, ಎಸ್.ಐ.ಟಿ ತನಿಖೆಯನ್ನು ಸರ್ಕಾರ ನೋಡಿಕೊಳ್ಳಲಿದೆ. ತನಿಖೆ ನಡೆಸುವುದು ಸರ್ಕಾರದ ಜವಾಬ್ದಾರಿ, ಅವರು ಮಾಡಲಿ. ಯಾವ್ಯಾವ ಅಧಿಕಾರಿಗಳು ಬೇಕೋ ಕರೆಸಿಕೊಂಡು ಮಾಹಿತಿ ಪಡೆಯಲಿ. ಸರ್ಕಾರ ಬೀಳಿಸಿ ಬಾಂಬೆಗೆ ಹೋಗಿದ್ದೇ ಸಿಡಿ ಆಗಲು ಕಾರಣ ಎಂದರು.