ಬೆಂಗಳೂರು: ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಪ್ರಕರಣಗಳಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಮತ್ತು ಸ್ವೀಕರಿಸಿರುವ ಪುರಾವೆಗಳು ಅತ್ಯಗತ್ಯವಾಗಿ ಬೇಕಿರುತ್ತವೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ನಿವೃತ್ತ ಸಬ್ ರಿಜಿಸ್ಟ್ರಾರ್ ವಿರುದ್ಧದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿತು.
ತಮ್ಮ ವಿರುದ್ಧದ ಪ್ರಕರಣ ಮತ್ತು ವಿಚಾರಣೆಯ ರದ್ದು ಕೋರಿ ಗದಗದ ನಿವೃತ್ತ ಸಬ್ ರಿಜಿಸ್ಟ್ರಾರ್ ಶ್ರೀಕಾಂತ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 7(ಎ) ಪ್ರಕಾರ, ಅಧಿಕಾರಿಗಳ ವಿರುದ್ಧ ದಾಳಿ ನಡೆಸುವ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಯಿಂದ ಯಾವುದಾದರೂ ಕೆಲಸ ಆಗುವುದು ಬಾಕಿ ಇರಬೇಕು. ಅದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿರಬೇಕು ಎಂದು ತಿಳಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಆ ಪ್ರಕ್ರಿಯೆ ನಡೆದಿಲ್ಲ. ಈ ಪ್ರಕ್ರಿಯೆಯಲ್ಲಿ ದೂರುದಾರ ಮತ್ತು ಸರ್ಕಾರಿ ಸೇವಕರಿರುವುದು ಕಡ್ಡಾಯ ಎಂದು ಪೀಠ ತಿಳಿಸಿದೆ.
ಎಸಿಬಿ ಅಧಿಕಾರಿಗಳು ದಾಳಿಯ ಸಂದರ್ಭದಲ್ಲಿ ಅರ್ಜಿದಾರರಿಂದ ಲಂಚಕ್ಕಾಗಿ ಬೇಡಿಕೆ ಇಟ್ಟಿರುವುದು ಮತ್ತು ಲಂಚ ಸ್ವೀಕರಿಸಿರುವ ಸಂಬಂಧ ಪಂಚನಾಮೆ ಮಾಡಿಲ್ಲ. ಆದರೆ, ಅರ್ಜಿದಾರರಿಂದ 9,390 ರೂ. ಮತ್ತು 50 ರೂ.ಗಳನ್ನು ಪಡೆದುಕೊಂಡಿದ್ದರು. ಆ ಮೊತ್ತವನ್ನು ದಾಖಲೆಗಳ ನೋಂದಣಿಗಾಗಿ ಸ್ವೀಕರಿಸಲಾಗಿದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ದಾಳಿ ನಡೆಸಿದ ಅಧಿಕಾರಿಗಳಿಗೆ ವಿವರಿಸಿದ್ದಾರೆ. ಹೀಗಿರುವಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಲಂಚ ಸ್ವೀಕರಿಸಿದ್ದಾರೆ ಎಂಬುದು ರಹಸ್ಯವಾಗಿರಲಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಪ್ರಸ್ತುತ ಪ್ರಕರಣದಲ್ಲಿ ಯಾವುದೇ ಅಂಶಗಳು ಒಳಗೊಂಡಿಲ್ಲ. ಆದ್ದರಿಂದ ಪ್ರಕರಣದ ವಿಚಾರಣೆ ಮುಂದುವರೆದಲ್ಲಿ ಕಾನೂನಿನ ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟು ಪ್ರಕರಣವನ್ನು ಕೋರ್ಟ್ ರದ್ದುಪಡಿಸಿತು.
ಪ್ರಕರಣದ ಹಿನ್ನೆಲೆ: ಗದಗದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು 2019ರಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಅನಾಮಧೇಯ ದೂರು ಸಲ್ಲಿಕೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ ಡಿವೈಎಸ್‌ಪಿ ತನಿಖೆ ನಡೆಸುತ್ತಿದ್ದರು.
ಅರ್ಜಿದಾರ ಶ್ರೀಕಾಂತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ವಿಚಾರಣೆ ಮುಂದುವರೆಸಿದ್ದರು. 2021ರಲ್ಲಿ ಪ್ರಕರಣ ಕುರಿತಾಗಿ ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ಪಡೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಶ್ರೀಕಾಂತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಪೀಠ, ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು. ಈ ನಡುವೆ ಲೋಕಾಯುಕ್ತವನ್ನು ಮರುಸ್ಥಾಪಿಸಿದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಲೋಕಾಯುಕ್ತವನ್ನು ಪ್ರತಿವಾದಿಯನ್ನಾಗಿ ಮಾಡಲಾಗಿತ್ತು.
ಇದನ್ನೂ ಓದಿ: ಮುಂದಿನ ವಿಚಾರಣೆವರೆಗೆ ಮಾಲ್ ಆಫ್ ಏಷ್ಯಾ ವಿರುದ್ಧ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ
ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 7ರ ಪ್ರಕಾರ, ಅಧಿಕಾರಿಗಳ ಮೇಲೆ ದಾಳಿ ನಡೆಸಿರುವ ಸಂದರ್ಭದಲ್ಲಿ ಅಂಥ ಅಧಿಕಾರಿಯು ಕಾನೂನುಬದ್ಧವಾಗಿ ಪಡೆಯುವ ವೇತನವನ್ನು ಹೊರತುಪಡಿಸಿ ಸಂಭಾವನೆ ಪಡೆದಿರಬೇಕು ಎಂಬುದಾಗಿದೆ. ಆದರೆ, ಅರ್ಜಿದಾರರ ವಿರುದ್ಧ ಈ ರೀತಿಯ ಆರೋಪ ಇರಲಿಲ್ಲ. ಅಲ್ಲದೆ, ಪ್ರಕರಣದಲ್ಲಿ ಯಾವುದೇ ರೀತಿಯ ದಾಳಿ ನಡೆಸಲಾಗಿಲ್ಲ. ಕಚೇರಿಯನ್ನು ಶೋಧಿಸಿದ ಅಧಿಕಾರಿಗಳು ಅಲ್ಲಿ ಲಭ್ಯವಾಗಿದ್ದ 27 ಸಾವಿರ ರೂ.ಗಳನ್ನು ವಶಕ್ಕೆ ಪಡೆದು, ಸಿಬ್ಬಂದಿ ಮೇಲೆ ಲಂಚ ಪಡೆದಿರುವ ಆರೋಪ ಮಾಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಲೋಕಾಯುಕ್ತ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ಕಚೇರಿಯಲ್ಲಿ ಹಾಜರಿದ್ದ ಹಲವು ಖಾಸಗಿ ವ್ಯಕ್ತಿಗಳೊಂದಿಗೆ 100 ರೂ.ಗಳಿಗಿಂತಲೂ ಹೆಚ್ಚಿನ ಹಣ ಪಡೆದಿರುವ ಆರೋಪವಿದೆ. ಹಾಗಾಗಿ ಪ್ರಕರಣದ ತನಿಖೆ ನಡೆಸುವ ಅಗತ್ಯವಿದೆ ಎಂದು ವಾದ ಮಂಡಿಸಿದ್ದರು.