ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಸರ್ವ ಜನ, ಸರ್ವಪಕ್ಷಗಳಿಗೆ ಹೆಜ್ಜೆ ಹಾಕಲು ಕಾಂಗ್ರೆಸ್ ಅವಕಾಶ ಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ತಿಳಿಸಿದರು.
ನಗರದ ಬಿಟಿಎಂ ಲೇಔಟ್ ಬಿಬಿಎಂಪಿ ಕ್ರೀಡಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ರಾಜ್ಯದ ಮೂಲೆಮೂಲೆಯಿಂದ ಜನರು ಬರುತ್ತಿದ್ದಾರೆ. ನಾಳೆ (ಗುರುವಾರ) ಅಂತಿಮ ದಿನದ ಪಾದಯಾತ್ರೆ ಇದ್ದು, ನ್ಯಾಷನಲ್ ಕಾಲೇಜಿನಲ್ಲಿ ಮುಕ್ತಾಯವಾಗಲಿದೆ. ಎಲ್ಲ ವರ್ಗದ ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಪಕ್ಷಾತೀತವಾಗಿ ಹೆಜ್ಜೆ ಹಾಕಿದ್ದಾರೆ ಎಂದರು.
ಅಂತಿಮ ದಿನದ ಪಾದಯಾತ್ರೆಯಲ್ಲಿನ ಹೆಜ್ಜೆಗೆ ಬಹಳ ಬೆಲೆ. ಇದಕ್ಕೆ ಹೆಜ್ಜೆ ಹಾಕಿದರೆ ಇತಿಹಾಸ ಪುಟ ಸೇರುತ್ತೆ. ಇದರ ನೇತೃತ್ವವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ, ಪರಿಷತ್ ಪ್ರತಿಪಕ್ಷ ನಾಯಕ ಹರಿಪ್ರಸಾದ, ಬಿ.ಕೆ.ಶ್ರೀನಿವಾಸ್ ವಹಿಸಿಕೊಳ್ಳುತ್ತಾರೆ. ಎಲ್ಲ ಜನರು ಭಾಗವಹಿಸಬೇಕು. ಎಲ್ಲರಿಗೂ ಒಂದು ಭಾಗ್ಯ ಸಿಗಲಿದೆ. ಹೋರಾಟದಲ್ಲಿ ಎಲ್ಲ ಸಂಘಟನೆಗಳು ಭಾಗವಹಿಸುವ ಮೂಲಕ ಪಾದಯಾತ್ರೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಅಧಿಕಾರಕ್ಕೆ ಬಂದರೆ ಎನ್ಇಪಿ ರದ್ದು: ಇದೇ ವೇಳೆ, ನೂತನ ಶಿಕ್ಷಣ ನೀತಿಗೆ ಟೀಕಿಸಿದ ಅವರು, ಬಿಜೆಪಿಯವರು ನಾಗಪುರ ಎಜುಕೇಷನ್ ಪಾಲಿಸಿ ತಂದಿದ್ದಾರೆ. ವರ್ಷಕ್ಕೆ ಒಂದು ಸರ್ಟಿಫಿಕೇಟ್ ಕೊಡೋಕೆ ಹೊರಟಿದ್ದಾರೆ. ಯಾಕೆ ನಮ್ಮ ಎಜುಕೇಷನ್ ಚೆನ್ನಾಗಿಲ್ವ?. ಬೇರೆ ರಾಜ್ಯದಲ್ಲಿ ಈ ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿಲ್ಲ. ರಾಜ್ಯದಲ್ಲಿ ಮುಂದೆ ನಮ್ಮ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದನ್ನು ರದ್ದು ಮಾಡುತ್ತೇವೆ. ಈ ಮೂಲಕ ನಾಗಪುರ ಶಿಕ್ಷಣ ಬಂದ್ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.
ಇದನ್ನೂ ಓದಿ: ಮುಂದುವರಿದ ಮೇಕೆದಾಟು ಪಾದಯಾತ್ರೆ.. ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ
ಸರ್ಕಾರ ಕ್ಷಮೆ ಕೇಳಲಿ: ಯುದ್ಧ ಪೀಡಿತ ಉಕ್ರೇನ್ ನಲ್ಲಿ ಬುಧವಾರ ರಾಜ್ಯದ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದಾನೆ. ಸರ್ಕಾರ ಈತನ ಪ್ರತಿಭೆ ಗುರುತಿಸಿಲ್ಲ. ನವೀನ್ ಸಾವು ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅವರ ಮನೆಯವರ ಕ್ಷಮೆ ಕೇಳಬೇಕು. ನಾವು ಕೂಡ ಪಾದಯಾತ್ರೆ ಮುಗಿದ ಬಳಿಕ ಕುಟುಂಬಸ್ಥರ ಭೇಟಿ ಮಾಡಿ ಸಾಂತ್ವನ ಹೇಳುತ್ತೇವೆ ಎಂದು ತಿಳಿಸಿದರು.