ಬೆಂಗಳೂರು: ಜಗತ್ತಿನ ಗಮನ ಸೆಳೆದಿರುವ ಅಯೋಧ್ಯೆಯಲ್ಲಿ ನಾಡಿನ ಕಲೆ, ಸಂಸ್ಕೃತಿ, ಪಾರಂಪರಿಕ ತಾಣಗಳನ್ನು ಪ್ರತಿಬಿಂಬಿಸುವ ಕರ್ನಾಟಕದ ಕಾವೇರಿ ಕರಕುಶಲ ಮಳಿಗೆ ಸ್ಥಾಪಿಸಲು ಕರ್ನಾಟಕ ಕರಕುಶಲ ನಿಗಮ ತೀರ್ಮಾನಿಸಿದೆ ಎಂದು ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದರು.
ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು, ಕರ್ನಾಟಕ ಕರಕುಶಲ ನಿಗಮದ ಅಧ್ಯಕ್ಷರಾಗಿ ಕಳೆದ ಒಂದು ತಿಂಗಳಲ್ಲಿ ಕೈಗೊಂಡ ತೀರ್ಮಾನಗಳ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಸುದೀರ್ಘ ಸಮಾಲೋಚನೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಮುಖವಾಗಿ ಅಯೋಧ್ಯೆಯಲ್ಲಿ ಕಾವೇರಿ ಕರಕುಶಲ ನಿಗಮ ಸ್ಥಾಪಿಸಲು ಕಾರ್ಯ ಯೋಜನೆ ರೂಪಿಸಲಾಗಿದೆ. ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ನಿಗಮದಲ್ಲಿ ತಯಾರಾದ ಕೋದಂಡರಾಮ ಕಲಾಕೃತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗಿತ್ತು. ಇದಾದ ಬಳಿಕ ಇದೇ ಮಾದರಿಯ 200 ಕ್ಕೂ ಹೆಚ್ಚು ಕಲಾಕೃತಿಗಳಿಗೆ ಬೇಡಿಕೆ ಬಂದಿದೆ. ಇದರ ಜೊತೆಗೆ ರಾಜ್ಯದ ವಿಶ್ವವಿಖ್ಯಾತ ಹಂಪಿ, ಮೈಸೂರು ಅರಮನೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತಿತರ ಕಲಾಕೃತಿಗಳಿಗೂ ಬೇಡಿಕೆ ಇದೆ. ಹೀಗಾಗಿ ಅಯೋಧ್ಯೆ ಮತ್ತಿತರ ಕಡೆಗಳಲ್ಲಿ ಮಳಿಗೆ ಸ್ಥಾಪಿಸುವ ನಿಗಮದ ಪ್ರಸ್ತಾವನೆಗೆ ಮುಖ್ಯಮಂತ್ರಿಯವರು ಅನುಮೋದನೆ ನೀಡಿದ್ದಾರೆ ಎಂದರು.
ಅಯೋಧ್ಯೆ ಮಾತ್ರವಲ್ಲದೆ ತಿರುಪತಿ, ಶಿರಡಿ, ಉಡುಪಿ, ಪುಣೆ ಸೇರಿ ದೇಶದ 8 ಕಡೆಗಳಲ್ಲಿ ನಿಗಮದ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಕರಕುಶಲ ವಸ್ತುಗಳ ಬೇಡಿಕೆ ಹೆಚ್ಚಿಸಲು ಸಂಚಾರಿ ವಾಹನಗಳ ಮೂಲಕ ಮಾರಾಟಕ್ಕೆ ಆದ್ಯತೆ ನೀಡಲಾಗುತ್ತಿದೆ. ಆನ್ ಲೈನ್ ಮೂಲಕ ಮಾರಾಟ, ಡಿಜಿಟಲ್ ಮಾರುಕಟ್ಟೆ, ಬ್ರಾಂಡಿಂಗ್ ಮಾರಾಟವನ್ನು ಉತ್ತೇಜಿಸಲಾಗುವುದು ಎಂದರು.
ಹಳೆಯ ಕರಕುಶಲ ವಸ್ತುಗಳಿಗೆ ಹೊಸ ಸ್ಪರ್ಶ ನೀಡಲು ಉದ್ದೇಶಿಸಿದ್ದು, ಇದಕ್ಕೆ ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ಕರಕುಶಲ ಕಲೆಗೆ ಹೊಸ ಸ್ವರೂಪ ನೀಡಲು ತೀರ್ಮಾನಿಸಲಾಗಿದೆ. ಗೃಹ ಬಳಕೆಯ ಡೈನಿಂಗ್ ಟೇಬಲ್ಗಳು, ಗೃಹೋಪಯೋಗಿ ವಸ್ತುಗಳನ್ನು ಇವತ್ತಿನ ಶೈಲಿಗೆ ಪೂರಕವಾಗಿ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ. ಇಡೀ ದೇಶದ ಕಲೆಗಳ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಕರಕುಶಲತೆಗೆ ಹೊಸ ಸ್ಪರ್ಶವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಬೀಟೆ ಮರದ ಪೀಠೋಪಕರಣ ಪ್ರದರ್ಶನ ಮತ್ತು ಮಾರಾಟಕ್ಕೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಿ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಶಿವಮೊಗ್ಗ ಮತ್ತು ಸಾಗರದಲ್ಲಿ ಶ್ರೀಗಂಧದ ಕಲಾ ಸಂಕೀರ್ಣಗಳನ್ನು ಪ್ರವಾಸಿ ತಾಣವನ್ನಾಗಿ ಮಾರ್ಪಾಡು ಮಾಡಿ, ಚೆನ್ನಪಟ್ಟಣದ ಆಟಿಕೆಗಳು ಮತ್ತು ಬೀಟೆ ಮರದ ಕುಂದಣ ಕಲೆಯಲ್ಲಿ ಗುರುಕುಲ ಮಾದರಿ ಶಿಕ್ಷಣ ನೀಡಲು ಚೆನ್ನಪಟ್ಟಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ನಿಗಮದ ಮಾರಾಟ ಮಳಿಗೆಗಳಲ್ಲಿ ಶಿಸ್ತು ಮೂಡಿಸಲು ಆದ್ಯತೆ ನೀಡುವ ಜೊತೆಗೆ, ಕರಕುಶಲ ವಸ್ತುಗಳ ಕೇಂದ್ರೀಕೃತ ಉಗ್ರಾಣ ಸ್ಥಾಪನೆ, ಗಣಕೀಕೃತ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಸಿಸಿಟಿವಿ ಅಳವಡಿಕೆಗೆ ಆದ್ಯತೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ನಿಗಮ ಕೈಗೊಂಡಿರುವ ಕ್ರಮಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಗಮದ ಅಭಿವೃದ್ಧಿಗೆ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಆದಷ್ಟು ಶೀಘ್ರದಲ್ಲೇ ಜಾರಿಗೆ ತರುವಂತೆಯೂ ಸಲಹೆ ನೀಡಿದ್ದಾರೆ ಎಂದು ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದರು.