ಬೆಂಗಳೂರು: ರಾಜ್ಯದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಒಂದು ತಿಂಗಳಲ್ಲಿ ಅಗತ್ಯ ಆರ್ಥಿಕ ಅನುಕೂಲಗಳು ಸುಗಮವಾಗಿ ಸಿಗುವಂತೆ ಮಾಡಲು ಆ್ಯಂಕರ್ ಬ್ಯಾಂಕ್ ಆರಂಭಿಸಲಾಗುವುದು. ಈ ಮೂಲಕ ರಾಜ್ಯದಲ್ಲಿ ದುಡಿಮೆಯ ಕ್ರಾಂತಿ ಸಾಧ್ಯವಾಗುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಮತ್ತು ನಗರ ಜೀವನೋಪಾಯ ಅಭಿಯಾನದಡಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 10 ದಿನಗಳ 'ರಾಷ್ಟ್ರೀಯ ಸಂಜೀವಿನಿ ಸರಸ್ ಮೇಳ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಸ್ವಸಹಾಯ ಸಂಘಗಳಿಗೆ ಬಲ ತುಂಬಲು ಈ ಸಲದ ಬಜೆಟ್ನಲ್ಲಿ 500 ಕೋಟಿ ರೂ. ಕೊಡಲಾಗಿದೆ. ಈ ಮೂಲಕ 4 ಲಕ್ಷ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಅಲ್ಲದೆ, ಈ ವರ್ಷ ಮಹಿಳಾ ಕಾರ್ಯಕ್ರಮಗಳಿಗೆ 47 ಸಾವಿರ ಕೋಟಿ ರೂ. ಮತ್ತು ಮಕ್ಕಳಿಗೆ ಸಂಬಂಧಿಸಿದ ನಾನಾ ಯೋಜನೆಗಳಿಗೆ 43 ಸಾವಿರ ಕೋಟಿ ರೂ. ಗಳಷ್ಟು ಅಗಾಧ ಮೊತ್ತವನ್ನು ಬಜೆಟ್ನಲ್ಲಿ ಪ್ರಕಟಿಸಲಾಗಿದೆ. ಇವೆಲ್ಲವುಗಳ ಅನುಷ್ಠಾನದ ಸಂಬಂಧ ಇನ್ನೂ ಒಂದು ವಾರದಲ್ಲಿ ಸೂಕ್ತ ಆದೇಶಗಳನ್ನು ಹೊರಡಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ನಮ್ಮ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದರೂ ಅವರ ದುಡಿಮೆಗೆ ಮನ್ನಣೆ ಸಿಗುತ್ತಿಲ್ಲ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಜನಾಂಗಗಳ ಮಹಿಳೆಯರಲ್ಲಿ ಅಪಾರ ಪ್ರತಿಭೆ ಮತ್ತು ಕೌಶಲ್ಯಗಳಿವೆ. ಆದರೆ, ಒಟ್ಟು ಸ್ತ್ರೀಯರ ಪೈಕಿ ಶೇ.5ರಿಂದ 10ರಷ್ಟು ಮಂದಿ ಮಾತ್ರ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಹೆಣ್ಣು ಮಕ್ಕಳ ದುಡಿಮೆಗೆ ನೆಲೆ-ಬೆಲೆಗಳು ಸಿಕ್ಕಿದರೆ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಇವರನ್ನು ಹೊರಗಿಟ್ಟು ಸಮಗ್ರ ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಅದಕ್ಕೆ ಯಾವ ಅರ್ಥವೂ ಇಲ್ಲ ಎಂದು ಪ್ರತಿಪಾದಿಸಿದರು.
ಹಳ್ಳಿಗಳ ಮಹಿಳೆಯರಲ್ಲಿ ಅಪಾರ ಪ್ರತಿಭೆ ಇದೆ. ಇವರು ತಯಾರಿಸುವ ಕಸೂತಿ ವಸ್ತ್ರಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಅದನ್ನೇ ಅಮೆರಿಕ, ಇಂಗ್ಲೆಂಡ್ಗಳಲ್ಲಿ ಎಷ್ಟೋ ಜನ ನೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಕಸೂತಿಯನ್ನು ರಕ್ತಗತ ಮಾಡಿಕೊಂಡಿರುವ ಮಹಿಳೆಯರಿಗೆ ಗೌರವವೇ ಸಿಗುತ್ತಿಲ್ಲ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ವಾರ್ಷಿಕ 3 ಲಕ್ಷ ರೂ. ತಲಾವಾರು ಆದಾಯವಿದ್ದರೆ, ಬೀದರ್ ಜಿಲ್ಲೆಯಲ್ಲಿ ಕೇವಲ 1.50 ಲಕ್ಷ ರೂ. ಇದೆ. ತಲಾವಾರು ಆದಾಯದಲ್ಲಿ ರಾಜ್ಯವು ದೇಶದಲ್ಲಿ 4ನೇ ಸ್ಥಾನದಲ್ಲಿದ್ದರೂ ಒಟ್ಟು ಜನಸಂಖ್ಯೆಯ ಶೇ. 30 ರಷ್ಟು ಮಂದಿ ಮಾತ್ರ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಉಳಿದ ಶೇ.70ರಷ್ಟು ಮಂದಿಯನ್ನು ಕೂಡ ಸುಸ್ಥಿರ ಬದುಕಿನ ಜತೆಗೆ ಆರ್ಥಿಕ ಚಟುವಟಿಕೆಗಳ ಭಾಗವಾಗಿಸಬೇಕು ಎನ್ನುವುದು ಸರ್ಕಾರದ ಸಂಕಲ್ಪವಾಗಿದೆ. ಹೀಗಾದರೆ ಮಾತ್ರ ರಾಜ್ಯದ ಜಿಡಿಪಿ ಏರುಗತಿಯಲ್ಲಿ ಸಾಗಲಿದೆ. ಈ ದೇಶ ಮುನ್ನಡೆ ಸಾಧಿಸುತ್ತಿರುವುದು ಬಡವರಿಂದಲೇ ವಿನಾ ಶ್ರೀಮಂತರಿಂದಲ್ಲ ಎಂದು ನುಡಿದರು.
ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಆಶಯ ನುಡಿಗಳನ್ನಾಡಿ, ಮಹಿಳಾ ಸ್ತ್ರೀಸಹಾಯ ಸಂಘಗಳ ಸಬಲೀಕರಣಕ್ಕೆ ಕಾರ್ಪೊರೇಟ್ ಸಂಸ್ಥೆಗಳು, ನವೋದ್ಯಮಗಳು, ಎನ್.ಜಿ.ಒಗಳ ನೆರವು ತೆಗೆದುಕೊಳ್ಳಲಾಗುತ್ತಿದೆ. ಜತೆಗೆ ಈ ಸಂಘಗಳ ಉತ್ಪನ್ನಗಳ ಬ್ರ್ಯಾಂಡ್, ಪ್ಯಾಕಿಂಗ್ ಮಾತ್ತು ಮಾರುಕಟ್ಟೆ ವಿಸ್ತರಣೆಗೆ ಒತ್ತು ಕೊಡಲಾಗುತ್ತಿದೆ. ಕೇಂದ್ರ ಸರ್ಕಾರವು ಡಿಜಿಟಲೀಕರಣಕ್ಕೆ ಆದ್ಯತೆ ಕೊಟ್ಟಿದ್ದು, ಸುಗಮ ವಹಿವಾಟಿಗೆ ಆ್ಯಪ್ ಒದಗಿಸಿದೆ. ಸ್ವಸಹಾಯ ಸಂಘಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ಈ ವರ್ಷವನ್ನು 'ಜೀವನೋಪಾಯ ವರ್ಷ’ವೆಂದು ಘೋಷಿಸಲಾಗಿದ್ದು, ಈ ಕಾರ್ಯಕ್ರಮಗಳಿಗೆ 1,500 ಕೋಟಿ ರೂ. ಒದಗಿಸಲಾಗುತ್ತಿದೆ. ಇದರಿಂದ ಸ್ವಸಹಾಯ ಸಂಘಗಳಲ್ಲಿ ಸಕ್ರಿಯರಾಗಿರುವ 30 ಲಕ್ಷ ಮಹಿಳೆಯರಿಗೆ ಆರ್ಥಿಕ ಚೈತನ್ಯ ಸಿಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಟಿ.ಬಿ.ನಾಗರಾಜ್, ಶಂಕರಗೌಡ ಪಾಟೀಲ ಮುನೇನಕೊಪ್ಪ, ಶಾಸಕರಾದ ಉದಯ್ ಗರುಡಾಚಾರ್ ಮತ್ತು ರವಿ ಸುಬ್ರಹ್ಮಣ್ಯ, ಎಂಎಲ್ಸಿ ಎ.ದೇವೇಗೌಡ, ಜೀವನೋಪಾಯ ಅಭಿಯಾನದ ನಿರ್ದೇಶಕಿ ಮಂಜುಶ್ರೀ, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ ಮತ್ತು ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಯೋಜನಾಧಿಕಾರಿ ಸುಮತಿ, ನಟಿಯರಾದ ಲಕ್ಷ್ಮಿ ಗೋಪಾಲಸ್ವಾಮಿ ಮತ್ತು ಸೋನು ಗೌಡ ಉಪಸ್ಥಿತರಿದ್ದರು.
23 ರಾಜ್ಯಗಳು ಮೇಳದಲ್ಲಿ ಭಾಗಿ: ಏಪ್ರಿಲ್ 18 ರವರೆಗೆ ನಡೆಯಲಿರುವ 'ಸಂಜೀವಿನಿ ಸರಸ್ ಮೇಳ’ದಲ್ಲಿ 23 ರಾಜ್ಯಗಳ 300ಕ್ಕೂ ಹೆಚ್ಚು ಮಳಿಗೆಗಳಿದ್ದು, ಇಲ್ಲಿ ಕರಕುಶಲ ಉತ್ಪನ್ನಗಳು, ಕಸೂತಿ, ಉಪ್ಪಿನಕಾಯಿ, ಅಲಂಕಾರಿಕ ವಸ್ತುಗಳು, ವರ್ಣಚಿತ್ರಗಳು, ಟೆರಾಕೋಟಾ ವಸ್ತುಗಳು, ಕೈಮಗ್ಗದ ವಸ್ತ್ರಗಳು, ಸಿಹಿತಿಂಡಿಗಳು , ಸಾಂಬಾರ ಪದಾರ್ಥಗಳು, ವೈವಿಧ್ಯಮಯ ಸೀರೆಗಳು, ಮಹಿಳೆಯರ ಉಡುಪುಗಳು ಸೇರಿದಂತೆ ಮುಂತಾದವು ಲಭ್ಯವಿವೆ. ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶವಿದೆ.
ಪತ್ನಿಗೆ ಸೀರೆ ಖರೀದಿಸಿದ ಸಿಎಂ ಬಸವರಾಜ ಬೊಮ್ಮಾಯಿ: ಕಾರ್ಯಕ್ರಮ ಉದ್ಘಾಟಿಸುವುದಕ್ಕೂ ಮುನ್ನ ಮೇಳದಲ್ಲಿ ಒಂದು ಸುತ್ತು ಹಾಕಿದ ಮುಖ್ಯಮಂತ್ರಿ ಬೊಮ್ಮಾಯಿ, ತಮ್ಮ ಪತ್ನಿಗೆ 2,500 ರೂ.ಗಳ ಒಂದು ಸೀರೆಯನ್ನು ಖರೀದಿಸಿದರು.
4 ಗ್ರಾಪಂ ಒಕ್ಕೂಟಗಳಿಗೆ ಪ್ರಶಸ್ತಿ: ಗ್ರಾಮ ಪಂಚಾಯತ್ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾ.ಪಂ ವ್ಯಾಪ್ತಿಯ ದಿವ್ಯಜ್ಯೋತಿ ಸ್ವಸಹಾಯ ಸಂಘಗಳು ಒಕ್ಕೂಟ, ಹೊಸಕೋಟೆ ತಾ. ದೊಡ್ಡನಲ್ಲಾಳ ಗ್ರಾಮದ ಚೇತನಾ ಒಕ್ಕೂಟ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾ. ಯಳನಾಡಿನ ನಿಸರ್ಗ ಒಕ್ಕೂಟ ಮತ್ತು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾ. ರಾಮನಗರ ಗ್ರಾ.ಪಂ ವ್ಯಾಪ್ತಿಯ ಪರಿವಾರ ಒಕ್ಕೂಟಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಿದರು.
ಇದನ್ನೂ ಓದಿ: ಕಪಾಳಮೋಕ್ಷ ಪ್ರಕರಣ.. ವಿಲ್ಸ್ಮಿತ್ಗೆ ಆಸ್ಕರ್ನಿಂದ 10 ವರ್ಷ ನಿಷೇಧ