ಬೆಂಗಳೂರು: 15 ಕ್ಷೇತ್ರಗಳ ಉಪ ಚುನಾವಣೆಗೆ ಸಂಪೂರ್ಣವಾಗಿ ಸನ್ನದ್ಧವಾಗಿದ್ದು, ಚುನಾವಣೆಯಲ್ಲಿ ನಾವು ಏಕ ಪಕ್ಷದ ಸ್ಥಿರ ಸರ್ಕಾರ ಸ್ಥಾಪನೆ ಹಾಗೂ ಅಭಿವೃದ್ಧಿ ಪರ ಮತಗಳನ್ನು ಕೇಳಲಿದ್ದೇವೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಾಮಗ್ರಿಗಳ ಉದ್ಘಾಟನೆ ಮಾಡಲಾಯಿತು. ಬಳಿಕ ಮಾತನಾಡಿದ ಅರವಿಂದ ಲಿಂಬಾವಳಿ, ಉಪ ಚುನಾವಣೆಯನ್ನು ರಾಜಕೀಯ ದೃವೀಕರಣ ಎಂದು ಬಿಜೆಪಿ ಭಾವಿಸಲಿದೆ. ಹಿಂದಿನ ಮೈತ್ರಿ ಸರ್ಕಾರ, ಸ್ಥಿರ ಸರ್ಕಾರ ನೀಡದೇ ಇರುವುದು ಹಾಗೂ ಉತ್ತಮ ಆಡಳಿತ ನೀಡದೇ ಇರುವುದನ್ನು ಧಿಕ್ಕರಿಸಿ ಅನೇಕರು ರಾಜೀನಾಮೆ ಕೊಟ್ಟಿದ್ದಾರೆ. ಹಾಗಾಗಿ ಮೂರು ವರ್ಷ ಸ್ಥಿರ ಆಡಳಿತ ನೀಡಲು ಮತಯಾಚನೆ ಮಾಡಲಿದ್ದೇವೆ ಎಂದರು.
ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿ ಒಳ್ಳೆಯ ಆಡಳಿತ ನೀಡಿದ್ದೆವು. ಸದಾನಂದಗೌಡ, ಶೆಟ್ಟರ್ ಸೇರಿ ಐದು ವರ್ಷ ಒಳ್ಳೆಯ ಆಡಳಿತ ನೀಡಿದ್ದೆವು. ಈಗ ನಾಲ್ಕು ತಿಂಗಳಿನಲ್ಲಿನ ಆಡಳಿತ, ಪ್ರವಾಹದ ಪರಿಸ್ಥಿತಿ, ಬೆಂಗಳೂರಿನ ಸಂಚಾರ ಸಮಸ್ಯೆ ಸೇರಿ ಹಲವು ವಿಷಯ ಕುರಿತು ನಮ್ಮ ಸರ್ಕಾರ ಆ ಸಮಸ್ಯೆಗಳನ್ನು ಪರಿಹರಿಸುವತ್ತ ತಕ್ಷಣ ಗಮನ ಹರಿಸಿದೆ. ಇದನ್ನೆಲ್ಲಾ ಮತದಾರರ ಮುಂದಿಡಲಿದ್ದೇವೆ ಎಂದರು.
ಮಗನ ಪರವಾಗಿ ಅಥವಾ ಬಿಜೆಪಿ ಅಭ್ಯರ್ಥಿ ವಿರುದ್ಧವಾಗಿ ಸಂಸದ ಬಚ್ಚೇಗೌಡ ಯಾವುದೇ ಹೇಳಿಕೆ ನೀಡಿಲ್ಲ. ಒಂದು ವೇಳೆ ಬಚ್ಚೇಗೌಡರು ಅಂತಹ ಹೆಜ್ಜೆ ಇಟ್ಟರೆ ಕ್ರಮ ಕೈಗೊಳ್ಳುವುದು ಖಚಿತ. ಆದರೆ ಅವರು ಹಿರಿಯ ನಾಯಕರು. ಅಂತಹ ಕೆಲಸ ಮಾಡಲ್ಲ. ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲಿದ್ದಾರೆ ಎಂದರು.
ಇನ್ನು, ಕೆ.ಆರ್ ಪೇಟೆಯಲ್ಲಿ ವಿವಾದ ಆದ ನಂತರವೇ ಚುನಾವಣಾ ಉಸ್ತುವಾರಿಯನ್ನು ಬದಲಾವಣೆ ಮಾಡಲಾಗಿದೆ. ಅಲ್ಲಿ ಅನಗತ್ಯ ಗೊಂದಲ ಆಗಬಾರದು ಎನ್ನುವ ಕಾರಣ ಮತ್ತು ಇಲಾಖಾ ಕಾರ್ಯಭಾರ ಜಾಸ್ತಿ ಇದೆ ಎಂದು ಸ್ವತಃ ಮಾಧುಸ್ವಾಮಿ ಅವರೇ ಅಪೇಕ್ಷೆ ವ್ಯಕ್ತಪಡಿಸಿದ್ದರು. ಅವರೇ ಉಸ್ತುವಾರಿ ಬದಲಾವಣೆಗೆ ಮನವಿ ಮಾಡಿದ್ದರು. ಅದರಂತೆ ಬದಲಾವಣೆ ಮಾಡಲಾಗಿದೆ. ಇದೆಲ್ಲಾ ಪಕ್ಷದ ಆಂತರಿಕ ವಿಷಯ ಎಂದರು.
ನಾಳೆ ಸಿಎಂ ಬಿ.ಎಸ್.ಯಡಿಯೂರಪ್ಪ ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದು, ಬೆಂಗಳೂರಿನಿಂದ ಕಲಬುರಗಿಗೆ ಅಧಿಕೃತವಾಗಿ ಸಂಚಾರ ಆರಂಭ ಆಗಲಿದೆ ಎಂದು ಹೇಳಿ ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದರು.