ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ಘೋಷಿತವಾಗಿದ್ದ ವಸತಿ ಯೋಜನೆಯನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದ್ದು, ಇನ್ನು 15 ದಿನದಲ್ಲಿ ಹಣ ಬಿಡುಗಡೆ ಮಾಡದೇ ಹೋದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಡಿಸಲು ಮುಕ್ತ ರಾಜ್ಯದ ಕಲ್ಪನೆ ನಮ್ಮದಾಗಿತ್ತು. ಕಾಂಗ್ರೆಸ್ ಅವಧಿಯಲ್ಲಿ 16,38,564 ಮನೆ ನೀಡಲಾಗಿತ್ತು. ಪಾರದರ್ಶಕವಾಗಿ ಯೋಜನೆ ಅನುಷ್ಠಾನಗೊಳಿಸಿದ್ದೆವು. ಸಾಮಾನ್ಯ ವಸತಿ ರಹಿತರಿಗೆ 1 ಲಕ್ಷ 21 ಸಾವಿರ, ಪರಿಶಿಷ್ಟರಿಗೆ 1 ಲಕ್ಷ 70 ಸಾವಿರ ಹಣ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಎಲ್ಲವನ್ನೂ ತಟಸ್ಥಗೊಳಿಸಿದೆ.
8 ತಿಂಗಳಿಂದ ಯೋಜನೆಯ ಅನುದಾನ ತಟಸ್ಥಗೊಂಡಿದೆ. 13,97,115 ಮನೆಗಳಿಗೆ ಅನುಮತಿ ನೀಡಲಾಗಿತ್ತು. ಒಟ್ಟು 1,36,741 ಮನೆ ಬ್ಲಾಕ್ ಮಾಡಲಾಗಿದೆ. ಒಟ್ಟು 3,59,919 ಮನೆಗಳು ಪ್ರಗತಿಯಲ್ಲಿವೆ. 360412 ಮನೆಗಳಿಗೆ ಅವಕಾಶ ನಿರಾಕರಿಸಲಾಗಿದೆ.
ಗುಡಿಸಲು ಮುಕ್ತ ಕಾರ್ಯಕ್ರಮ ಸಂಪೂರ್ಣ ರದ್ಧಾಗಿದೆ. ರಾಜ್ಯ ಸರ್ಕಾರ ಬಡವರ ವಿರೋಧಿ ಧೋರಣೆ ತಾಳಿದೆ. ನಾಲ್ಕು ಹಂತದಲ್ಲಿ ಅನುದಾನ ಬಿಡುಗಡೆಯಾಗಬೇಕು. ಕೆಲವು ಕಡೆ ಒಂದು ಕಂತು ರಿಲೀಸ್ ಆಗಿದೆ. ಇನ್ನೂ ಕೆಲವರಿಗೆ ಯಾವುದೇ ಕಂತೂ ಆಗಿಲ್ಲ. ಸರ್ಕಾರ ಅನುದಾನ ತಡೆದರೆ ಅವರ ಗತಿಯೇನು? ಬಡವರ ವಸತಿ ಯೋಜನೆಗೆ ಸರ್ಕಾರದ ತಟಸ್ಥ ನಿಲುವೇಕೆ? ಎಂಟು ತಿಂಗಳಿಂದ ನಯಾಪೈಸೆ ಬಿಡುಗಡೆ ಮಾಡಿಲ್ಲ. ಆತ್ಮಹತ್ಯೆಯಂತಹ ಕೃತ್ಯಕ್ಕೆ ಬಡವರು ಒಳಗಾಗ್ತಿದ್ದಾರೆ. ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.