ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ರೈತ ವಿರೋಧಿ ಧೋರಣೆ ಹೊಂದಿದೆ. ಅಲ್ಲದೇ, ಕೈಗಾರಿಕೆಗಳಿಗೆ ಹಾಗು ಜನಸಾಮಾನ್ಯರಿಗೆ ಹೊಡೆತ ನೀಡುವ ನಿರ್ಧಾರಗಳನ್ನು ಕೈಗೊಂಡಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದ್ದಾರೆ. ಎಪಿಎಂಸಿ ಕಾನೂನು ರದ್ದು ಮಾಡುವ ಮೂಲಕ ರೈತರು ತಾವು ಬೆಳೆದಂತಹ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯದಿಂದ ವಂಚಿತರಾಗಿದ್ದಾರೆ. ಹಿಂದೆ ಸಾಗಾಣಿಕೆ ವೆಚ್ಚ, ದಲ್ಲಾಳಿಗಳ ಕಮಿಷನ್ ಇತರ ಖರ್ಚುಗಳ ಉಳಿತಾಯವಾಗುತ್ತಿತ್ತು.
ಈ ಮೇಲಿನ ಅನುಕೂಲಗಳನ್ನು ರದ್ದುಪಡಿಸಿ, ಕೇವಲ ಎಪಿಎಂಸಿಗಳಲ್ಲಿ ಮಾತ್ರ ಮಾರಾಟ ಮಾಡುವ ಹಳೆಯ ಕಾನೂನು ಜಾರಿಗೆ ತರುವುದು ಎಷ್ಟು ಸಮಂಜಸ ಎಂದು ಪತ್ರಿಕಾ ಹೇಳಿಕೆ ಮೂಲಕ ಪ್ರಶ್ನಿಸಿದ್ದಾರೆ. ವಿದ್ಯುತ್ ದರ ಏರಿಕೆ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಏಕಾಏಕಿ ವಿದ್ಯುತ್ ದರ ಏರಿಕೆಯಿಂದ ಬಟ್ಟೆ ಕೈಗಾರಿಕೆಗಳು, ರೈಸ್ ಮಿಲ್, ಬೆಲ್ಲ- ಸಕ್ಕರೆ ಉತ್ಪಾದನಾ ಕೈಗಾರಿಕೆಗಳು ಸೇರಿದಂತೆ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ (ಎಂಎಸ್‍ಎಂಇ) ಇವುಗಳಿಗೆ ಬಾರಿ ಹೊಡೆತ ಉಂಟಾಗಿದೆ. ಗೃಹ ಬಳಕೆಯ ಪ್ರತಿ ಯುನಿಟ್‍ಗೆ ಸರಾಸರಿ 70 ಪೈಸೆ ದರ ಹೆಚ್ಚಳ ಹಾಗೂ ಕನಿಷ್ಠ ದರವನ್ನು 60 ನಿಂದ 70 ರೂ. ಗೆ ಹೆಚ್ಚಳ ಮಾಡಲಾಗಿದೆ. ಈ ರೀತಿ ಬೇಕಾಬಿಟ್ಟಿ ದರ ಏರಿಕೆ ಮಾಡುವ ಮೂಲಕ ಗೃಹ ಬಳಕೆದಾರರಿಗೆ, ಸಣ್ಣ ಉದ್ಯಮದಾರರಿಗೆ ಪೆಟ್ಟು ನೀಡಿರುವುದು ಯಾವ ನ್ಯಾಯ ಎಂದು ಅವರು ಟೀಕಿಸಿದ್ದಾರೆ.
ರೈತ ವಿದ್ಯಾನಿಧಿ ಯೋಜನೆಯನ್ನು ರದ್ದು ಮಾಡಲಾಗಿದೆ. 11 ಲಕ್ಷ ರೈತ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ರೂ 438.69 ಕೋಟಿ ರೂಪಾಯಿಗಳ ರೈತ ವಿದ್ಯಾನಿಧಿ ಯೋಜನೆಯನ್ನು ರದ್ದು ಪಡಿಸುವ ಮೂಲಕ ಬಡ ರೈತನ ಮಕ್ಕಳಿಗೆ ಅನ್ಯಾಯವೆಸಗುತ್ತಿರುವುದು ಎಷ್ಟು ಸರಿ. ಹಾಗು ಜಿಲ್ಲೆಗೊಂದು ಗೋಶಾಲೆ ಯೋಜನೆ ರದ್ದು ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಗೋಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಿಸಲು ಪ್ರತಿ ಜಿಲ್ಲೆಗೊಂದು ಗೋಶಾಲೆಯನ್ನು ಸ್ಥಾಪಿಸಲು ಬಿಜೆಪಿ ಸರ್ಕಾರ ತಿರ್ಮಾನಿಸಿತ್ತು. ಅಂತಹ ಪೂಜನೀಯ ಗೋಮಾತೆಯನ್ನು ಅಕ್ರಮ ಗೋ ಸಾಗಾಣೆಕಾರರಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹಿಂಪಡೆಯಲಾಗಿದೆ ಎಂದು ಈರಣ್ಣ ಕಡಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭೂ ಸಿರಿ ಯೋಜನೆ ರದ್ದು ಮಾಡಿದ್ದು, ರಾಜ್ಯದ ಸುಮಾರು 50 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ಭೂ ಸಿರಿ ಎಂಬ ಯೋಜನೆಯಲ್ಲಿ 10,000 ರೂ. ಹೆಚ್ಚುವರಿ ಸಹಾಯಧನ ನೀಡುವ ಹಿಂದಿನ ಸರ್ಕಾರದ ನಿರ್ಣಯವನ್ನು ರದ್ದು ಪಡಿಸಲಾಗುತ್ತಿದೆ. ಇನ್ನೊಂದೆಡೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರದ್ದು ಮಾಡಲಾಗಿದೆ. ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ಕೂಡ ಸುಮಾರು 51 ಲಕ್ಷ ರೈತರಿಗೆ (ವಾರ್ಷಿಕ ಎರಡು ಕಂತುಗಳಲ್ಲಿ 4000 ರೂ.) ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿದ್ದನ್ನು ತಡೆ ಹಿಡಿಯಲು ರಾಜ್ಯ ಸರ್ಕಾರ ಯೋಚಿಸುತ್ತಿದೆ. ಇದು ಸರಿಯಾದ ನಿರ್ಧಾರವಲ್ಲ.
ರಾಜ್ಯದ ರೈತರಿಗೆ ಪ್ರತಿ ಎಕರೆಗೆ 250 ರೂ. ನಂತೆ, 5 ಎಕರೆಗೆ 1250 ರೂ. ಗಳ ಡೀಸೆಲ್ ಸಹಾಯಧನ ನೀಡುವ ರೈತ ಶಕ್ತಿ ಯೋಜನೆಯನ್ನು ಪ್ರಸ್ತುತ ಸರ್ಕಾರ ರದ್ದುಪಡಿಸುತ್ತಿದೆ. ಇದಲ್ಲದೆ, ನೀರಾವರಿ ಯೋಜನೆಗಳ ನಿರ್ಲಕ್ಷ ಮುಂದುವರಿದಿದೆ. ಬಿಜೆಪಿ ರಾಜ್ಯ ಸರ್ಕಾರದಲ್ಲಿ ನೀರಾವರಿ ಯೋಜನೆಗಳಿಗೆ 23 ಸಾವಿರ ಕೋಟಿ ಅನುದಾನ ಒದಗಿಸಿದ್ದು, ಅದನ್ನು ಈಗ 19 ಸಾವಿರ ಕೋಟಿ ರೂ. ಗೆ ಇಳಿಸಿ, ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಮಾಡಿದ ಪಾದಯಾತ್ರೆ ಕೇವಲ ರಾಜಕೀಯ ಸ್ಟಂಟ್ ಎಂಬುವುದನ್ನು ನಿರೂಪಿಸಿದೆ ಎಂದು ಈರಣ್ಣ ಕಡಾಡಿ ಆರೋಪಿಸಿದ್ದಾರೆ.
ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದು ಮಾಡಿರುವುದು ಸರಿಯಲ್ಲ. ಹಿಂದೆ ಕೃಷಿ ಭೂಮಿ ಕೊಳ್ಳುವವರು ಕೃಷಿಕನಾಗಿರಬೇಕು ಅಥವಾ ಕೃಷಿ ಕೂಲಿಕಾರನಾಗಿರಬೇಕು ಎಂಬ ನಿಯಮವಿತ್ತು. ಹೀಗಾಗಿ ರೈತರ ಜಮೀನುಗಳಿಗೆ ಯೋಗ್ಯದರ ಸಿಗುತ್ತಿರಲಿಲ್ಲ. ಇದನ್ನು ಬಿಜೆಪಿ ಸರ್ಕಾರ ಇದ್ದಾಗ ಕೃಷಿ ಭೂಮಿ ಮಾರಾಟ ಕಾಯ್ದೆ ಎಂಬ ಕಾನೂನನ್ನು ತರಲಾಯಿತು. ಈ ಕಾಯ್ದೆಯಲ್ಲಿ ಯಾರು ಬೇಕಾದರೂ ಕೃಷಿ ಜಮೀನನ್ನು ಕೊಂಡುಕೊಳ್ಳಬಹುದು ಎಂಬ ನಿಯಮವನ್ನು ಜಾರಿ ಮಾಡಲಾಯಿತು.
ಇದರಿಂದ ಕೃಷಿ ಜಮೀನುಗಳ ಮೌಲ್ಯ ಹೆಚ್ಚಾಗಿ ಇದರಿಂದ ಕೃಷಿ ಪದವೀಧರ ವಿದ್ಯಾರ್ಥಿಗಳು ಕೂಡ ಜಮೀನನ್ನು ಖರೀದಿಸುವ ಮೂಲಕ ಹೊಸ ಕೃಷಿ ಪದ್ಧತಿಗಳ ಮೂಲಕ ಕೃಷಿಯನ್ನು ಮಾಡಲಾಯಿತು. ಇಂದು ಸಿದ್ದರಾಮಯ್ಯ ಸರ್ಕಾರ ಈ ಕೃಷಿ ಭೂಮಿ ಮಾರಾಟ ಕಾಯ್ದೆಯನ್ನು ರದ್ದುಗೊಳಿಸಿದೆ. ಇದು ಕೃಷಿ ಭೂಮಿಯ ದರ ಕುಸಿದು ಕೃಷಿಕರಿಗೆ ಹೊಡೆತ ನೀಡಲಿದೆ ಎಂದು ಈರಣ್ಣ ಕಡಾಡಿ ಆಕ್ಷೇಪಿಸಿದ್ದಾರೆ.
ಈ ಜನವಿರೋಧಿ ನೀತಿಗಳಿಂದ ರೈತರು ಮತ್ತು ಬಡವರ್ಗದ ಜನರು ಮತ್ತು ಕೂಲಿ ಕಾರ್ಮಿಕರುಗಳಿಗೆ ಕೈಗಾರಿಕೋದ್ಯಮಿಗಳಿಗೆ ತೊಂದರೆಯಾಗಲಿದೆ. ಈ ಸರ್ಕಾರ ತೆಗೆದುಕೊಂಡಿರು ಈ ನಿರ್ಣಯಗಳಿಂದ ಹಿಂದೆ ಸರಿಯದಿದ್ದಲ್ಲಿ. ಈ ಜನ ವಿರೋಧಿ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ರೈತ ಮೋರ್ಚಾ ದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಈರಣ್ಣ ಕಡಾಡಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ.
ಇದನ್ನೂ ಓದಿ : ಕಬ್ಬು ಬೆಳೆಗಾರರ ಶೋಷಣೆ ತಪ್ಪಿಸಿ, ಬಾಕಿ ಪಾವತಿಗೆ ಕ್ರಮ ಕೈಗೊಳ್ಳಿ: ಸರ್ಕಾರಕ್ಕೆ ಈರಣ್ಣ ಕಡಾಡಿ ಆಗ್ರಹ