ಬೆಂಗಳೂರು: ರಾಜ್ಯದಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ-1989 ಹಾಗೂ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ನಿಮಯಗಳು-1995ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ರಾಜ್ಯದಲ್ಲಿ ಈಗಲೂ ಎಸ್ಸಿ-ಎಸ್ಟಿ ಸಮುದಾಯಗಳನ್ನು ಕೀಳಾಗಿ ಕಾಣುವ ಹಾಗೂ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಯ್ದೆ ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಪಿ.ಯಶೋಧ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ ಆಲಿಸಿದ ಪೀಠ, ಸಮಾಜ ಕಲ್ಯಾಣ ಇಲಾಖೆ, ರಾಜ್ಯ ಪೊಲೀಸ್ ಇಲಾಖೆ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಪಿಐಎಲ್ ಸಾರಾಂಶ:
ಎಸ್ಸಿ-ಎಸ್ಟಿ ಸಮುದಾಯದ ರಕ್ಷಣೆಗೆ ಕಾಯ್ದೆ ಹಾಗೂ ನಿಯಮಗಳನ್ನು ಜಾರಿ ಮಾಡಲಾಗಿದೆ. ಆದರೆ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡದೆ ಇರುವುದರಿಂದ ಸಮುದಾಯದ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಎಂಟು ಜಿಲ್ಲೆಗಳಲ್ಲಿ ಮಾತ್ರವೇ ವಿಶೇಷ ನ್ಯಾಯಾಲಯ ರಚಿಸಲಾಗಿದೆ. ವಿಚಕ್ಷಣಾ ಸಮಿತಿ ಇದ್ದರೂ ಅವು ಸರಿಯಾಗಿ ಸಭೆ ನಡೆಸುತ್ತಿಲ್ಲ.
ದೌರ್ಜನ್ಯ ಪ್ರಕರಣಗಳ ತನಿಖೆ ನಿಗದಿತ 60 ದಿನದಲ್ಲಿ ಪೂರ್ಣಗೊಳ್ಳುತ್ತಿಲ್ಲ. ಕಾಯ್ದೆ ಹಾಗೂ ನಿಯಮಗಳ ಬಗ್ಗೆ ಅರಿವು ಮೂಡಿಸಲು ಸರ್ಕಾರ ಯಾವುದೇ ಜಾಗೃತಿ ಕಾರ್ಯಕ್ರಮ ಮಾಡುತ್ತಿಲ್ಲ. ಆದ್ದರಿಂದ ಕಾಯ್ದೆಯ ನಿಯಮಗಳಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ರಚಿಸಬೇಕು. ಕಾಲ ಕಾಲಕ್ಕೆ ಸಭೆ ನಡೆಸುವಂತೆ ವಿಚಕ್ಷಣಾ ಸಮಿತಿಗೆ ಸೂಚಿಸಬೇಕು. ಹಾಗೆಯೇ ಕಾಯ್ದೆ ಅನುಷ್ಠಾನದ ಬಗ್ಗೆ ತಿಳಿಯಲು ಸರ್ವೇ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಕಾಯ್ದೆಯ ಪರಿಣಾಮಕಾರಿ ಜಾರಿಗೆ ಎಲ್ಲಾ ಅಗತ್ಯ ಕ್ರಮಗಳನ್ನು ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.