ಬೆಂಗಳೂರು:ಸಚಿವಾಲಯದಲ್ಲಿನ ಕಿರಿಯ ಸಹಾಯಕ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆಯನ್ನು ಕೈ ಬಿಡಬೇಕು. ಸಚಿವಾಲಯದಲ್ಲಿ ಹೊರಗುತ್ತಿಗೆ ಸೇವೆಯನ್ನು ರದ್ದುಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಸರ್ಕಾರಿ ನೌಕರರು ಕಪ್ಪು ಮಾಸ್ಕ್ ಧರಿಸಿ ಪ್ರತಿಭಟನೆ ನಡೆಸಿದರು.
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಸರ್ಕಾರಿ ನೌಕರರು ಭಾಗವಹಿಸಿದ್ದರು. ಸಚಿವಾಲಯದ ಶಾಖಾಕಾರಿಗಳಿಗೆ ತಹಶೀಲ್ದಾರ್ ಹುದ್ದೆಗೆ ನಿಯೋಜನೆ ಮೇರೆಗೆ ಹೋಗಲು ಅವಕಾಶ ನೀಡಬೇಕು.
ಹೊರಗುತ್ತಿಗೆ ಸೇವೆಯನ್ನು ರದ್ದುಪಡಿಸಿ, ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ ಮಾಡಬೇಕು. ನಿವೃತ್ತಿ ಅಧಿಕಾರಿ, ನೌಕರರನ್ನು ಪುನರ್ ನೇಮಕ ಮಾಡಬಾರದು. ಅವಧಿ ಮೀರಿರುವ ನಿಯೋಜನೆಯಲ್ಲಿರುವ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಬೇಕು ಎಂಬುದು ನೌಕರರ ಸಂಘದ ಆಗ್ರಹವಾಗಿದೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿಕೊಂಡ ಮಂಗಳೂರು ಮೂಲದ ಇಬ್ಬರು ವಿದ್ಯಾರ್ಥಿಗಳು
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಮಾತನಾಡಿ, ಸಚಿವಾಲಯದವರಿಗೆ ದುರುದ್ದೇಶಪೂರಕವಾಗಿ ತಹಶೀಲ್ದಾರರಾಗುವ ಅವಕಾಶವನ್ನು ಸರ್ಕಾರ ತಪ್ಪಿಸಿದೆ. ಇಲಾಖೆಗಳನ್ನು ವಿಲೀನಗೊಳಿಸುವ ನೆಪದಲ್ಲಿ ಸಚಿವಾಲಯದ ನೌಕರರಿಗೆ ಅನ್ಯಾಯ ಮಾಡಲು ಹೊರಟಿದೆ ಎಂದ ಅವರು, ಕಿರಿಯ ಸಹಾಯಕರ ಹುದ್ದೆಯನ್ನು ರದ್ದುಮಾಡಲು ಉದ್ದೇಶಿಸಿರುವ ಸರ್ಕಾರದ ಕ್ರಮ ಖಂಡಿಸಿದರು.
ನಮ್ಮ ಮನವಿಯನ್ನು ಸರ್ಕಾರ ಸ್ವೀಕರಿಸಿದರೂ ಇದೂವರೆಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಮ್ಮನ್ನು ಕರೆಯಿಸಿ ಬೇಡಿಕೆಯನ್ನು ಈಡೇರಿಸುವ ಪ್ರಯತ್ನವನ್ನು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.