ಆನೇಕಲ್ (ಬೆಂಗಳೂರು): ಸಿಲಿಕಾನ್ ಸಿಟಿ ಬೆಂಗಳೂರಿಗೆ ಹತ್ತಿರದಲ್ಲೇ ಇರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಒಂದಲ್ಲ ಒಂದು ವಿಶೇಷತೆಗಳಿಂದ ಪ್ರವಾಸರಿಗೆ ಅಚ್ಚುಮೆಚ್ಚಿನ ತಾಣ. ಆನೆಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇಂದು ವಿಶೇಷ ಹುಟ್ಟುಹಬ್ಬದ ಸಂಭ್ರಮ ನಡೆಯಿತು.
ಹೌದು, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ 'ವನಶ್ರೀಯ' ಹೆಣ್ಣು ಮರಿ 'ಓಂ ಗಂಗಾ' ಇಂದು ಮೊದಲನೇ ವರ್ಷದ ಹುಟ್ಟುಹಬ್ಬ. ಅಂತೆಯೇ ಪಾರ್ಕಿನ ಆವರಣದಲ್ಲಿ ಆನೆ ಮರಿಗೆ ಇಷ್ಟ ಆಗುವ ತರಕಾರಿ ಹಾಗೂ ಹಣ್ಣುಗಳನ್ನು ಕೇಕ್ ರೀತಿಯಲ್ಲಿ ಜೋಡಿಸಿ ವಿಭಿನ್ನವಾಗಿ ಜನ್ಮದಿನವನ್ನು ಸಿಬ್ಬಂದಿ ಆಚರಿಸಿ ಸಂಭ್ರಮಿಸಿದರು.
ಓಂ ಗಂಗಾ ಜನ್ಮದಿನಕ್ಕೆ ತರಕಾರಿ ಮತ್ತು ಹಣ್ಣುಗಳ ಕೇಕ್: ಇಲ್ಲಿನ ಸಿಬ್ಬಂದಿ ಆನೆ ಮರಿ ಜನ್ಮದಿನಕ್ಕಾಗಿ ಅನ್ನದ ಪೊಂಗಲ್, ಬೆಲ್ಲ, ತೆಂಗಿನಕಾಯಿ, ಕ್ಯಾರೆಟ್, ಬಾಳೆಹಣ್ಣು, ಕಬ್ಬು ಮತ್ತು ಕಲ್ಲಂಗಡಿಗಳಲ್ಲಿ ವಿಶೇಷವಾಗಿ ಕೇಕ್ ತಯಾರು ಮಾಡಿದ್ದರು. ಕ್ಯಾರೆಟ್, ಕಬ್ಬು, ಕಲ್ಲಂಗಂಡಿಯಲ್ಲೇ ಓಂ ಗಂಗಾ ಎಂದು ಕೇಕ್ ಮುಂದೆ ಬರೆದಿದ್ದರು. ಆನೆ ಮರಿಗೆ ಈ ವಿಶೇಷವಾದ ಕೇಕ್ ಅ ನೀಡುವ ಮೂಲಕ ಸಿಬ್ಬಂದಿಯು ಜನ್ಮದಿನದ ಶುಭಾಶಯ ಕೋರಿದರು.
ಓಂ ಗಂಗಾ ಜನ್ಮದಿನ ಹಿನ್ನೆಲೆಯಲ್ಲಿ ಆನೆಗಳ ಆರೈಕೆ ಕೇಂದ್ರದಲ್ಲಿರುವ ಎಲ್ಲ ಆನೆಗಳಿಗೂ ಈ ವಿಶೇಷವಾದ ಕೇಕ್ ನೀಡಲಾಯಿತು. ಬೆಂಗಳೂರಿನ ಜಿ-ಗ್ರೂಪ್ ಈ ಆನೆ ಮರಿಯನ್ನು ದತ್ತು ಪಡೆದು 'ಓಂ ಗಂಗಾ' ಎಂದು ಹೆಸರಿಟ್ಟಿತ್ತು.
ಗಮನ ಸೆಳೆದ ಕೇಕ್: ಸುತ್ತಲೂ ಬಾಳೆಹಣ್ಣು, ಮಧ್ಯದಲ್ಲಿ ಕೇಕ್ ಆಕಾರದಲ್ಲಿ ಪೊಂಗಲ್, ಅದರ ಮೇಲೆ ಅಲಂಕಾರಿಕವಾಗಿ ಕ್ಯಾರೆಟ್ ಮತ್ತು ಕಲ್ಲಂಗಡಿ ಬಳಸಿ ಮಾಡಿರುವ ಕೇಕ್ ಗಮನ ಸೆಳೆಯಿತು.
ಇದನ್ನೂ ಓದಿ: ದೇಶದಲ್ಲಿ 60 ಹೊಸ ಆನೆ ಕಾರಿಡಾರ್ ಗುರುತಿಸಿದ ಕೇಂದ್ರ ಸರ್ಕಾರ