ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಆನೆ ದಾಳಿಯಿಂದ ಮೃತಪಟ್ಟವರಿಗೆ 25 ಲಕ್ಷ ರೂ ಮತ್ತು ಬೆಳೆಹಾನಿಗೆ ಪರಿಹಾರ ನೀಡಬೇಕು ಎಂದು ಜೆಡಿಎಸ್ ಪಕ್ಷದ ಶಾಸಕ ಎ ಟಿ ರಾಮಸ್ವಾಮಿ ನೇತೃತ್ವದಲ್ಲಿ ಶಾಸಕರಾದ ಹೆಚ್ ಕೆ ಕುಮಾರಸ್ವಾಮಿ, ಕೆ ಎಸ್ ಲಿಂಗೇಶ್ ವಿಧಾನಸೌಧ ಗಾಂಧಿ ಪ್ರತಿಮೆ ಬಳಿ ನಿನ್ನೆ ಧರಣಿ ನಡೆಸಿದರು. ಸ್ಥಳಕ್ಕಾಗಮಿಸಿದ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಜಾವೇದ್ ಅಕ್ತರ್, ಧರಣಿನಿರತ ಶಾಸಕರ ಮನವೊಲಿಸಲು ಯತ್ನಿಸಿದರು. 'ನಾವು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇವೆ. ಅವರೇ ಇಲ್ಲಿಗೆ ಬರಲಿ ಎಂದು ಹೇಳುವುದಿಲ್ಲ. ಅವರು ಕರೆದ ಸ್ಥಳಕ್ಕೆ ನಾವೇ ಹೋಗುತ್ತೇವೆ' ಎಂದು ಶಾಸಕರು ತಿಳಿಸಿದರು.
ಶಾಸಕ ಎ ಟಿ ರಾಮಸ್ವಾಮಿ ಮಾತನಾಡಿ, 'ಹಾಸನ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಮೊನ್ನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬಳ್ಳಿಯಲ್ಲಿ ಆನೆ ದಾಳಿಯಿಂದ ಒಬ್ಬ ಮೃತಪಟ್ಟಿದ್ದಾನೆ. ನಾವು ಕಳೆದ ವಿಧಾನಸಭೆ ಅಧಿವೇಶನದಲ್ಲಿ ಆನೆ ದಾಳಿ ಬಗ್ಗೆ ಚರ್ಚಿಸಿದ್ದೆವು. ಆಗ ಮುಖ್ಯಮಂತ್ರಿಗಳು ಆನೆ ದಾಳಿ, ಬೆಳೆಹಾನಿ ಪರಿಹಾರ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿದೆ. ಈಗ ಇರುವ 7.50 ಲಕ್ಷ ರೂ ದ್ವಿಗುಣವಾದರೆ 15 ಲಕ್ಷ ರೂ ಆಗುತ್ತದೆ. ಆದರೆ 25 ಲಕ್ಷ ರೂ ಪರಿಹಾರ ಕೊಡಬೇಕು' ಎಂದು ಒತ್ತಾಯಿಸಿದರು.
ಶಾಸಕರ ಮನವೊಲಿಸಿದ ಸಚಿವ ಗೋಪಾಲಯ್ಯ: ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ಅಬಕಾರಿ ಸಚಿವ ಕೆ ಗೋಪಾಲಯ್ಯ, 'ಇದು ಒಂದು ದಿನದ ಸಮಸ್ಯೆ ಅಲ್ಲ. ಬ್ಯಾರಿಕೇಡ್ ನಿರ್ಮಾಣಕ್ಕೆ ನೂರು ಕೋಟಿ ರೂ ಬಿಡುಗಡೆಯಾಗಿದೆ. ಆದರೆ, ಹಾಸನ ಜಿಲ್ಲೆಗೆ ಕಡಿಮೆ ಬಂದಿದೆ. ಮಾನವ ಹಾನಿಯಾಗಿರೋದು ಹಾಸನದಲ್ಲೇ ಹೆಚ್ಚು. ಧರಣಿ ವಿಚಾರವನ್ನು ಸಿಎಂ ಗಮನಕ್ಕೂ ತಂದಿದ್ದೇನೆ. ಮೃತ ವ್ಯಕ್ತಿ ಕುಟುಂಬಕ್ಕೆ ನೀಡುವ ಪರಿಹಾರವನ್ನು 15 ಲಕ್ಷಕ್ಕೇರಿಕೆ ಮಾಡಿದ್ದಾರೆ. ಸದ್ಯ 7.5 ಲಕ್ಷ ರೂ ಪರಿಹಾರ ನೀಡಿದ್ದಾರೆ. ಉಳಿದ 7.5 ಲಕ್ಷ ರೂ ಹಣವನ್ನು ಇನ್ನೊಂದು ವಾರದಲ್ಲಿ ನೀಡುತ್ತಾರೆ' ಎಂದರು. ಶಾಸಕರು ತಾತ್ಕಾಲಿಕವಾಗಿ ಧರಣಿ ಹಿಂಪಡೆದಿದ್ದಾರೆ.
ಇದನ್ನೂ ಓದಿ: 20 ದಿನದ ಅವಧಿಯಲ್ಲಿ ಆನೆ ದಾಳಿಗೆ 2ನೇ ಬಲಿ: ಮಲೆನಾಡಿಗರ ಆಕ್ರೋಶ