ಬೆಂಗಳೂರು : ಹೊಸ ಕಾರು ಖರೀದಿಸಿದ ಖುಷಿಯಲ್ಲಿ ವೇಗವಾಗಿ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಡರಾತ್ರಿ ವಿಜಯನಗರ ಸಂಚಾರಿ ಠಾಣಾ ವ್ಯಾಪ್ತಿಯ ಬಸವೇಶ್ವರ ನಗರದಲ್ಲಿ ನಡೆದಿದೆ. ಬೊಗ್ಗರಾಮ್ ನಾಗರಾಜ್ (61) ಮೃತ ಬೈಕ್ ಸವಾರ. ಹೊಸ ಎಲೆಕ್ಟ್ರಿಕ್ ಕಾರು ಖರೀದಿಸಿದ ಖುಷಿಯಲ್ಲಿ ಪೂಜೆ ಮಾಡಿಸಿ ಮನೆಗೆ ಹೊರಟಿದ್ದಾಗ ಕಾರು ಬೈಕ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಫುಟ್‌ಪಾತ್ ಮೇಲೆ ಬಿದ್ದಿದ್ದು ತಲೆಗೆ ಗಂಭೀರ ಗಾಯಗಳಾಗಿತ್ತು.
ಅಪಘಾತದ ಬಳಿಕ ಕಾರು ಚಾಲಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಗಾಯಾಳು ಬೈಕ್ ಸವಾರನನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಜಯನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್-ಕ್ಯಾಂಟರ್ ಡಿಕ್ಕಿ, ಇಬ್ಬರು ಸಾವು: ಬೆಂಗಳೂರಿನಲ್ಲೇ ಮತ್ತೊಂದು ಅಪಘಾತ ನಡೆದು ಯುವಕರಿಬ್ಬರು ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಅಂಜನಾನಗರ ಬಸ್ ನಿಲ್ದಾಣದ ಬಳಿ ಬೈಕ್ ಹಾಗೂ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ರವಿ (22) ಹಾಗೂ ವಿಕಾಸ್(20) ಮೃತರೆಂದು ತಿಳಿದುಬಂದಿದೆ.
ಸಾವನ್ನಪ್ಪಿದ ಯುವಕರಿಬ್ಬರು ಪಲ್ಸರ್ ಬೈಕ್ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಕ್ಯಾಂಟರ್ ಗುದ್ದಿದೆ. ಅಪಘಾತದ ರಭಸಕ್ಕೆ ಇಬ್ಬರೂ ಯುವಕರು ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಯುವಕರ ಮೈಮೇಲೆ ಕ್ಯಾಂಟರ್ ಹರಿದಿದೆ. ತಕ್ಷಣವೇ ಇಬ್ಬರನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ರಕ್ತಸ್ರಾವವಾಗಿದ್ದು ಇಬ್ಬರೂ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊಡಗು: ಅಪರಿಚಿತನಿಂದ ಯುವತಿಯ ಬರ್ಬರ ಹತ್ಯೆ