ಬೆಂಗಳೂರು: ಚುನಾವಣೆಗಳು 'ಜನಾದೇಶ' ವಾಗುವ ಬದಲು 'ಧನಾದೇಶ'ವಾಗುತ್ತಿವೆ. ನಮ್ಮ ಚುನಾವಣೆಗಳು ದುಬಾರಿಯಾಗಿವೆ. ಒಂದೊಂದು ಮಹಾಚುನಾವಣೆ ವೆಚ್ಚದಲ್ಲಿ ಒಂದೊಂದು ರಾಜ್ಯವನ್ನೇ ಅಭಿವೃದ್ಧಿ ಮಾಡಬಹುದಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಷಾದ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ 'ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ' ಕುರಿತು ವಿಶೇಷ ಚರ್ಚೆಯಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ಪ್ರತಿಯೊಂದು ರಾಜಕೀಯ ಪಕ್ಷ, ಸ್ಪರ್ಧಿಗಳು ಹಣವನ್ನು ಲೆಕ್ಕವಿಲ್ಲದೆ ವೆಚ್ಚ ಮಾಡುತ್ತಾರೆ. ಅಪರಾಧ ಹಿನ್ನೆಲೆ ಇರುವವರೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಇದರಿಂದ ಸಮಾನಾಂತರ ಸ್ಪರ್ಧೆ ಕ್ಷೀಣಿಸಿದೆ ಎಂದರು.
ಇದನ್ನೂ ಓದಿ: 'ನಾಲ್ಕೇ ನಾಲ್ಕು ಆಂಧ್ರ ಗುತ್ತಿಗೆದಾರರು ಈ ರಾಜ್ಯವನ್ನು ಲೂಟಿ ಹೊಡೆದಿದ್ದಾರೆ': ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ
ನಮ್ಮ ಚುನಾವಣಾ ಪ್ರಕ್ರಿಯೆಯು ನ್ಯಾಯಯುತ ಮತ್ತು ನಿರ್ಭೀತವಾಗಿರುವ ರಾಷ್ಟ್ರವನ್ನು ನಿರ್ಮಿಸುವುದು ನಮ್ಮ ಸದುದ್ದೇಶವಾಗಿದೆ. 'ಚುನಾವಣಾ ಅಕ್ರಮಗಳು ಪ್ರಜಾಪ್ರಭುತ್ವಕ್ಕೆ ನಿಧಾನಗತಿಯ ಪಾರ್ಶ್ವವಾಯು' ಎಂದು ಕರೆಯಬಯಸುತ್ತೇನೆ. ಚುನಾವಣೆಗಳು ಕಲುಷಿತವಾದರೆ ಪ್ರಜಾಪ್ರಭುತ್ವವೆಂಬ ವೃಕ್ಷ ಉಳಿಯಲಾರದು. ಈ ವೃಕ್ಷ ಇನ್ನೂ ಹೆಮ್ಮರವಾಗಿ ಬೆಳೆಯಬೇಕಾದರೆ ಒಳ್ಳೆಯ ನೀರನ್ನು ಉಣಿಸಬೇಕಾದುದು ನಮ್ಮ ಜವಾಬ್ದಾರಿ. ಪ್ರಜಾಪ್ರಭುತ್ವದ ಚುನಾವಣೆಗಳೆಂಬ ಐಕ್ಯಮತದ ಹಬ್ಬಗಳು ಸಂಭ್ರಮ, ಶ್ರದ್ಧೆ ಮತ್ತು ಪರಿಶುದ್ಧವಾಗಿ ನಡೆಯಬೇಕು ಎನ್ನುವುದು ನಮ್ಮೆಲ್ಲರ ಕಳಕಳಿ ಎಂದು ಹೇಳಿದರು.
ಹಣ, ಜಾತಿ, ತೋಳು ಬಲ: ವಿಶ್ವದ ಇತಿಹಾಸದಲ್ಲಿ ಅತಿ ಬೃಹತ್ ಗಾತ್ರದ ಚುನಾವಣೆ ವ್ಯವಸ್ಥೆ ನಮ್ಮ ದೇಶ ಹೊಂದಿದೆ. ಇತ್ತೀಚಿನ ಚುನಾವಣೆಗಳು ಹಣ, ಜಾತಿ, ತೋಳು ಬಲದಿಂದ ಕೂಡಿದ್ದು, ಗ್ರಾಮ, ಸಮಾಜ, ಮತ್ತು ಕುಟುಂಬಗಳಲ್ಲಿ ವೈಷಮ್ಯದ ವಾತಾವರಣ ಸೃಷ್ಟಿಸಿದೆ. ಜೊತೆಗೆ ಸಾವು ನೋವುಗಳಿಗೂ ಕಾರಣವಾಗಿರುವುದು ವಿಷಾದದ ಸಂಗತಿ. ಚುನಾವಣೆಯಲ್ಲಿ ನೀತಿ ಸಂಹಿತೆ ಗಾಳಿಗೆ ತೂರಿ ಕೀಳು ನಿಂದನೆ, ದ್ವೇಷ, ದಳ್ಳುರಿಯನ್ನು ಉಂಟು ಮಾಡುವ ಭಾಷಣಗಳು, ಚುನಾವಣಾ ಅಕ್ರಮಗಳು ಹೆಚ್ಚಾಗಿವೆ. ಚುನಾವಣೆಯಲ್ಲಿ ಭ್ರಷ್ಟಾಚಾರ, ಅಪರಾಧೀಕರಣ, ಜಾತಿವಾದ, ಧಾರ್ಮಿಕ ದುರಾಭಿಮಾನ ತೊಡೆದು ಹಾಕಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಶೇಷ ಚುನಾವಣಾ ಕೋರ್ಟ್ ರಚನೆ: ಕ್ರಿಮಿನಲ್ ಹಿನ್ನೆಲೆ ಹೊತ್ತ ಶಾಸಕರ ಪ್ರಕರಣಗಳನ್ನು ಇತ್ಯರ್ಥಕ್ಕೆ ವಿಶೇಷ ಚುನಾವಣಾ ಕೋರ್ಟ್ಗಳ ರಚನೆ ಮಾಡಬೇಕು. ಅಭ್ಯರ್ಥಿಗಳ ಸ್ಪರ್ಧೆಗೆ ಮಿತಿ ಹೇರಬೇಕು. ಕಡ್ಡಾಯ ಮತದಾನ ವ್ಯವಸ್ಥೆ ಮಾಡಬೇಕು. ಒಂದು ರಾಷ್ಟ್ರ ಒಂದು ಚುನಾವಣೆ ಮೂಲಕ ಚುನಾವಣಾ ವೆಚ್ಚ ಕಡಿತ ಮಾಡಬಹುದಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಸಾಮಾಜಿಕ ಮತ್ತು ರಾಜಕೀಯ ನಿರ್ಬಂಧ ವಿಧಿಸಬೇಕು. ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರಲು ಪ್ರಜಾ ಪಾತಿನಿಧ್ಯ ಕಾಯ್ದೆ ಹಾಗೂ ಸಂಬಂಧಿಸಿದ ಕಾನೂನು ತಿದ್ದುಪಡಿ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.