ಬೆಂಗಳೂರು: ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಟಾರ್ಗೆಟ್ ಮಾಡಿರುವುದಕ್ಕೆ ಪ್ರತಿಯಾಗಿ ಜಾತ್ಯತೀತ ಜನತಾ ದಳವು ಕೌಂಟರ್ ನೀಡಲು ಮುಂದಾಗಿದೆ. ಎರಡೂ ಪಕ್ಷಗಳ ಅತೃಪ್ತ ನಾಯಕರು ಮತ್ತು ಶಾಸಕರನ್ನು ಸೆಳೆಯಲು ಆಪರೇಷನ್ ಜೆಡಿಎಸ್ ಕಾರ್ಯಾಚರಣೆಯನ್ನು ತೆರೆಮರೆಯಲ್ಲಿ ನಡೆಸುತ್ತಿದೆ.
ದಕ್ಷಿಣ ಕರ್ನಾಟಕದಲ್ಲಿ ಬಲವಾಗಿ ಬೇರು ಬಿಟ್ಟಿರುವ ಜಾತ್ಯಾತೀತ ಜನತಾ ದಳವನ್ನು ರಾಜಕೀಯವಾಗಿ ದುರ್ಬಲಗೊಳಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ತಂತ್ರಗಾರಿಕೆ ರೂಪಿಸತೊಡಗಿವೆ. ಜಾತ್ಯತೀತ ಜನತಾ ದಳದ ಗೆಲ್ಲುವ ಕುದುರೆಗಳನ್ನು ಸೆಳೆಯುವುದು ಮತ್ತು ಜೆಡಿಎಸ್ನ ಭದ್ರಕೋಟೆಯಲ್ಲಿ ಒಕ್ಕಲಿಗರ ಮತಗಳನ್ನು ವಿಭಜಿಸುವುದು ಎರಡೂ ರಾಷ್ಟ್ರೀಯ ಪಕ್ಷಗಳ ಚುನಾವಣೆ ರಾಜಕೀಯದ ತಂತ್ರಗಾರಿಕೆಯ ಭಾಗವಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ, ದಳಪತಿಗಳ ಟಾರ್ಗೆಟ್: ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆದರಾ ಮೋದಿ?
ಬಿಜೆಪಿ ಮತ್ತು ಕಾಂಗ್ರೆಸ್ ನಡೆಸುತ್ತಿರುವ ರಾಜಕಾರಣದ ಒಳಮರ್ಮ ಅರಿತಿರುವ ಜೆಡಿಎಸ್, ಬೇರೆ ಪಕ್ಷಗಳಿಗೆ ವಲಸೆ ಹೋಗಲು ಸಿದ್ಧವಾಗಿರುವ ಪಕ್ಷದ ಶಾಸಕರು ಮತ್ತು ನಾಯಕರನ್ನು ಸಂಧಾನ ನಡೆಸಿ ತನ್ನಲ್ಲೇ ಉಳಿಸಿಕೊಳ್ಳುವುದರ ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್ನ ಅತೃಪ್ತ ಮುಖಂಡರನ್ನು ಜೆಡಿಎಸ್ಗೆ ಸೇರಿಸಿಕೊಳ್ಳಲು ಬಲೆ ಬೀಸಿದೆ. ಆಪರೇಷನ್ ಕಮಲದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ನಾಯಕರು, ಶಾಸಕರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ಸದ್ದುಗದ್ದಲವಿಲ್ಲದೇ ಜೆಡಿಎಸ್ ನಡೆಸಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರಾಗಿದ್ದ ಸಿಎಂ ಇಬ್ರಾಹಿಂ ಅವರನ್ನು ಪಕ್ಷದ ತೆಕ್ಕೆಗೆ ಸೇರಿಸಿಕೊಂಡಂತೆ ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಅತೃಪ್ತರಾಗಿರುವ ಶಾಸಕರ ಹಾಗು ಮುಖಂಡರ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡಿದೆ. ಎರಡೂ ಪಕ್ಷಗಳಲ್ಲಿ ಟಿಕೆಟ್ ವಂಚಿತರಾಗುವ ಮುಖಂಡರನ್ನು ಸಹ ಸ್ಥಳೀಯ ಕ್ಷೇತ್ರದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಪಕ್ಷಕ್ಕೆ ಸೇರಿಸಿಕೊಂಡು ವಿದಾನಸಭೆ ಚುನಾವಣೆಯಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ.
ಜಾರಕಿಹೊಳಿ ಬ್ರದರ್ಸ್ಗೆ ಗಾಳ: ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲು ಕಾರಣಕರ್ತರಾದ ಹಾಗು ಸಚಿವ ಸ್ಥಾನ ನೀಡದೇ ಬಿಜೆಪಿ ಹೈಕಮಾಂಡ್ ಸತಾಯಿಸುತ್ತಿರುವುದರಿಂದ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರನ್ನು ಜೆಡಿಎಸ್ಗೆ ಸೇರಲು ಮಾಜಿ ಸಿಎಂ ಕುಮಾರಸ್ವಾಮಿ ಆಫರ್ ನೀಡಿದ್ದಾರೆ ಎಂದು ಹೇಳಲಾಗ್ತಿದೆ. ಈ ಸಂಬಂಧ ಜೆಡಿಎಸ್ನ ವರಿಷ್ಠರು ಮತ್ತು ಜಾರಕಿಹೊಳಿ ಬ್ರದರ್ಸ್ ನಡುವೆ ಎರಡು ಮೂರು ಬಾರಿ ರಾಜಕೀಯ ಸಭೆಗಳು ಸಹ ನಡೆದಿವೆ ಎನ್ನಲಾಗ್ತಿದೆ.
ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ಈಗಲೇ ಲೆಕ್ಕಾಚಾರ: ಟಿಕೆಟ್ ವಂಚಿತ ಕೈ - ಕಮಲ ನಾಯಕರು ಜೆಡಿಎಸ್ಗೆ ?
ಬರುವ ವರ್ಷ 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಅಧಿಕಾರ ಸಿಗುವುದಿಲ್ಲ. ಆಡಳಿತ ಪಕ್ಷ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಸಹ ಹೆಚ್ಚಿನ ಸೀಟು ಗೆದ್ದು ಸ್ವತ ಬಲದ ಮೇಲೆ ಅಧಿಕಾರ ರಚಿಸಲು ಸಾಧ್ಯವಿಲ್ಲ. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ ಈ ಹಿಂದಿನಂತೆ ಜೆಡಿಎಸ್ ಮತ್ತೆ ಕಿಂಗ್ ಮೇಕರ್ ಆಗಲಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಜೆಡಿಎಸ್ ಮನೆ ಬಾಗಿಲಿಗೆ ಬರಬೇಕಾಗುತ್ತದೆ. ಆಗ ಜೆಡಿಎಸ್ನಲ್ಲಿರುವ ಶಾಸಕರಿಗೆ ಸಚಿವರಾಗುವ ಭಾಗ್ಯ ಸಿಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಮ್ಮದೇ ಆದ ರಾಜಕೀಯ ಲೆಕ್ಕಾಚಾರದ ದಾಳವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಅತೃಪ್ತರ ಮುಂದೆ ಉರುಳಿಸಿದ್ದಾರೆಂದು ತಿಳಿದುಬಂದಿದೆ.
ಮುಸ್ಲಿಂ ನಾಯಕರ ಮೇಲೂ ದಳ ಕಣ್ಣು: ಜಾತ್ಯತೀತ ಜನತಾದಳವು ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್ ವಂಚಿತ ಮುಖಂಡರನ್ನು ಸೆಳೆದು ಶಕ್ತಿ ಹೆಚ್ಚಿಸಿಕೊಳ್ಳುವತ್ತ ಜೆಡಿಎಸ್ ವಿಶೇಷವಾಗಿ ಗಮನಹರಿಸಿದೆ. ಜಾರಕಿಹೊಳಿ ಬ್ರದರ್ಸ್ ಜೊತೆಗೆ ಜೆಡಿಎಸ್ ನಲ್ಲಿಯೇ ಇದ್ದು ನಂತರ ಕಂಗ್ರೆಸ್ ಸೇರಿದ ಮುಸ್ಲಿಂ ಸಮುದಾಯದ ನಾಯಕರಾದ ಮಾಜಿ ಸಚಿವ ಜಮೀರ್ ಅಹ್ಮದ್, ಗಂಗಾವತಿಯ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ ಸೇರಿದಂತೆ ಹಲವು ಮುಸ್ಲಿಂ ನಾಯಕರಿಗೆ ಆಪರೇಷನ್ ಮಾಡುವತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಮಗ್ನರಾಗಿದ್ದಾರೆ ಎಂದು ಗೊತ್ತಾಗಿದೆ.
ಕೇಂದ್ರದ ಮಾಜಿ ಸಚಿವರಾದ ಹಿರಿಯ ಕಾಂಗ್ರೆಸ್ ನಾಯಕ ಕೆ ಹೆಚ್ ಮುನಿಯಪ್ಪ, ವಿಧಾನ ಪರಿಷತ್ ಚುನಾವಣೆಯ ಪರಾಜಿತ ಅಭ್ಯರ್ಥಿ ಕಾಂಗ್ರೆಸ್ನ ಕೆಜಿಎಫ್ ಬಾಬು, ಮಾಜಿ ಸಚಿವ ಟಿ ಬಿ ಜಯಚಂದ್ರ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಜೆಡಿಎಸ್ ಆಸಕ್ತಿ ವಹಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಅತೃಪ್ತರ ಮನವೊಲಿಕೆ ಕಸರತ್ತು ನಡೆಸಿದೆ.
ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಸಿದ್ದರಾಮಯ್ಯ ಒಲವು.. ಹೇಗಿದೆ ಲೆಕ್ಕಾಚಾರ?