ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಮಂಗಳವಾರ ಒಟ್ಟು ಐದು ನಾಮಪತ್ರ ಸಲ್ಲಿಕೆಯಾಗಿದೆ ಎಂದು ವಿಧಾನಸಭೆಯ ಕಾರ್ಯದರ್ಶಿ ಹಾಗೂ ರಾಜ್ಯಸಭೆ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿ ಸೇರಿದಂತೆ ನಾಲ್ವರು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ನಿಂದ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಜೆಡಿಎಸ್ನಿಂದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಬಿಜೆಪಿಯಿಂದ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಸಂಗಮೇಶ ಚಿಕ್ಕನರಗುಂದ ಅವರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಅವರು ನಾಮಪತ್ರ ಸಲ್ಲಿಸುವಾಗ ಫಾರಂ ನಂಬರ್ 26 ಹಳೆಯ ಮಾದರಿಯಲ್ಲೇ ಸಲ್ಲಿಸಿದ್ದಾರೆ. ಹಾಗಾಗಿ ಅವರಿಗೆ ನೋಟಿಸ್ ನೀಡಲಾಗಿದೆ. ಬುಧವಾರದವರೆಗೂ ಸಮಯವಿದ್ದು, ಅವರು ಹೊಸ ಮಾದರಿಯಲ್ಲಿ ಬರೆದುಕೊಡುವಂತೆ ಹೇಳಲಾಗಿದೆ. ಅವರಿಗೆ ಯಾರೂ ಅನುಮೋದಕರು ಸಹಿ ಹಾಕಿಲ್ಲ ಎಂದರು.
ಎಲ್ಲಾ ನಾಮಪತ್ರಗಳ ಪರಿಶೀಲನೆ ಬುಧವಾರ ನಡೆಯಲಿವೆ. ಒಂದು ವೇಳೆ ಚುನಾವಣೆ ನಡೆದರೆ ಕೋವಿಡ್ ಹಿನ್ನೆಲೆಯಲ್ಲಿ ಯಾವ ರೀತಿ ಚುನಾವಣೆ ಕ್ರಮ ಕೈಗೊಳ್ಳಬೇಕೆಂಬ ಮಾರ್ಗಸೂಚಿಯನ್ನು ತಿಳಿಸಲಾಗುವುದು ಎಂದು ವಿಶಾಲಾಕ್ಷಿ ಅವರು ತಿಳಿಸಿದರು.
ನಾಮಪತ್ರ ಪರಿಶೀಲನೆ ಬಳಿಕ ಸಮಗ್ರ ಮಾಹಿತಿ ನೀಡಲಾಗುವುದು ಎಂದು ಇದೇ ವೇಳೆ ಹೇಳಿದರು. ಇನ್ನು ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಜೂನ್ 29ರಂದು ಚುನಾವಣೆ ನಡೆಯಲಿದ್ದು, ಏಳು ಸ್ಥಾನಗಳಿಗೆ ಚುನಾವಣೆ ನಡೆದಿದೆ. ನಾಮಪತ್ರ ಸಲ್ಲಿಸಲು ಜೂನ್ 18ರವರೆಗೆ ಕಾಲಾವಕಾಶ ಇದೆ. ಜೂನ್ 22 ರ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ ಎಂದು ತಿಳಿಸಿದರು.