ಬೆಂಗಳೂರು : ವಿಧಾನಪರಿಷತ್ನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕೋವಿಡ್ ನಡುವೆಯೂ ಪ್ರಮುಖ ರಾಜಕೀಯ ಪಕ್ಷಗಳು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ. ಇನ್ನು ಪಕ್ಷೇತರರು ಸಹ ಗೆಲುವಿಗಾಗಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರ 2008ರಲ್ಲಿ ಬಿಜೆಪಿ ವಶಕ್ಕೆ ಪಡೆಯಿತು. 2014 ರಲ್ಲಿ ಎಸ್.ವಿ. ಸಂಕನೂರ ಗೆಲುವು ಸಾಧಿಸಿದ್ದರು. ಈಗ ಮರು ಆಯ್ಕೆ ಬಯಸಿ ಅವರು ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ಎಂ.ಕುಬೇರಪ್ಪಗೆ ಸ್ಪರ್ಧಿಸಿದ್ದಾರೆ. ಜೆಡಿಎಸ್ ನಿಂದ ಅಣ್ಣಿಗೇರಿಯ ವಕೀಲ ಶಿವಶಂಕರ ಕಲ್ಲೂರ ಅವರು ಸ್ಪರ್ಧಿಸಿದ್ದಾರೆ.
ಇನ್ನು ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ, ಸದ್ಯ ರಾಷ್ಟ್ರೀಯ ಸಂಘದ ಉಪಾಧ್ಯಕ್ಷರಾಗಿರುವ ಬಸವರಾಜ ಗುರಿಕಾರ ಪಕ್ಷೇತರನಾಗಿ ಕಣಕ್ಕಿಳಿದಿದ್ದಾರೆ. ಶಿವಶಂಕರ ಕಲ್ಲೂರ ಅವರು ತಟಸ್ಥರಾಗಿರುವುದರಿಂದ ಇದೀಗ ಗುರಿಕಾರ ಅವರಿಗೆ ಜೆಡಿಎಸ್ ಬೆಂಬಲ ಘೋಷಿಸಿರುವುದರಿಂದ ಮತ್ತಷ್ಟು ಬಲ ಬಂದಂತಾಗಿದೆ.
ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರು, ಪದವೀಧರರ ಹಲವಾರು ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಸದನದ ಒಳಗೆ, ಹೊರಗೆ ಹುದ್ದೆಯ ಘನತೆಗೆ ಕುಂದು ಬಾರದಂತೆ ನಡೆದುಕೊಂಡಿದ್ದಾರೆ. ಕುಬೇರಪ್ಪ ಶಿಕ್ಷಕರ ಸಂಘಟನೆಗಳ ಮೂಲಕ ಪರಿಚಿತರು. ಈ ಹಿಂದೆ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸಿ, ಸಿಗದಿದ್ದಾಗ ಸ್ವತಂತ್ರವಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಕೆಲ ವರ್ಷದ ಹಿಂದೆಯೇ ಕಾಂಗ್ರೆಸ್ ಸೇರಿದ್ದ ಅವರು ಇತ್ತೀಚೆಗೆ ಪಕ್ಷ ಸಂಘಟನೆ ಚುರುಕುಗೊಳಿಸಿದ್ದಾರೆ. ಇದನ್ನು ಗಮನಿಸಿ ಕಾಂಗ್ರೆಸ್ ನಾಯಕರು ಅವರಿಗೆ ಟಿಕೆಟ್ ನೀಡಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ - ಬಿಜೆಪಿ ಮಧ್ಯೆ ಸ್ಪರ್ಧೆ ಹೆಚ್ಚಿದೆ. ಆದರೂ, ಜೆಡಿಎಸ್ ಹಾಗೂ ಇತರರು ಎಷ್ಟು ಮತ ಪಡೆಯುತ್ತಾರೆ ಎಂಬುದರ ಮೇಲೆ ಫಲಿತಾಂಶ ಕುತೂಹಲ ಮೂಡಿದೆ.
ಈ ಕ್ಷೇತ್ರದಲ್ಲಿ ಶೇ.50 ರಷ್ಟು ಮತದಾರರು ಲಿಂಗಾಯತ-ವೀರಶೈವ ಸಮುದಾಯಕ್ಕೆ ಸೇರಿದವರಾಗಿದ್ದು, ಇದು ಲಿಂಗಾಯತ ಸಮುದಾಯದ ಎಸ್.ವಿ.ಸಂಕನೂರ ಅವರಿಗೆ ಟಿಕೆಟ್ ನೀಡಿರುವ ಬಿಜೆಪಿಗೆ ಅನುಕೂಲವಾಗಿದೆ. ಬ್ರಾಹ್ಮಣ, ಇತರ ಸಮುದಾಯದ ಹೆಚ್ಚಿನ ಮತಗಳೂ ಬಿಜೆಪಿಗೇ ಬರುತ್ತವೆ ಎನ್ನುವುದು ನಾಯಕರ ಲೆಕ್ಕಾಚಾರ. ಆರ್.ಎಂ.ಕುಬೇರಪ್ಪ ಅವರು ರಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಎಲ್ಲ ಸಮುದಾಯದೊಂದಿಗೆ ಸ್ನೇಹ ಹೊಂದಿದ್ದಾರೆ. ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಕುರುಬ ಸಮಾಜದವರು. ಶಿಕ್ಷಕರ ಸಂಘದಲ್ಲಿ ಸುದೀರ್ಘ ಕಾರ್ಯ ನಿರ್ವಹಿಸಿದ್ದರಿಂದ ಜಾತಿಗಳನ್ನು ಮೀರಿ ಮತಗಳು ಬರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಗಳೆಷ್ಟು? : ಗದಗ, ಹಾವೇರಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಪಶ್ಚಿಮ ಪದವೀಧರ ಕ್ಷೇತ್ರ ಒಳಗೊಂಡಿದೆ.
ಪ್ರತಿಷ್ಠೆಯ ಕಣ : ಪಶ್ಚಿಮ ಪದವೀಧರ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಸಚಿವರಾದ ಜಗದೀಶ್ ಶೆಟ್ಟರ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಸಿ.ಸಿ.ಪಾಟೀಲ್ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹಾಗಾಗಿ, ಈ ಎಲ್ಲಾ ನಾಯಕರು ತಮ್ಮ ಅಭ್ಯರ್ಥಿಯ ಪರ ಶ್ರಮಿಸುತ್ತಿದ್ದಾರೆ.
ಕ್ಷೇತ್ರ ವ್ಯಾಪ್ತಿ ಎಷ್ಟು? : ಒಟ್ಟು 3 ಲೋಕಸಭಾ ಕ್ಷೇತ್ರಕ್ಕೆ ಬರುವ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 23 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 23 ಕ್ಷೇತ್ರಗಳಲ್ಲಿ 19 ಬಿಜೆಪಿ ಶಾಸಕರಿದ್ದಾರೆ. 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಮೂರೂ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರಿದ್ದಾರೆ. ಮೂರು ಪಕ್ಷಗಳಿಂದ ತಲಾ ಒಬ್ಬರು ಮೇಲ್ಮನೆ ಸದಸ್ಯರಿದ್ದಾರೆ.
ಮತದಾರರೆಷ್ಟು? : ಇತರ 11 ಮತದಾರರು ಸೇರಿ ಒಟ್ಟು 75,774 ಮತದಾರರಿದ್ದಾರೆ. ಪುರುಷರು 48,580 ಹಾಗೂ 27,183 ಮಹಿಳಾ ಮತದಾರರಿದ್ದಾರೆ.
ಕಣದಲ್ಲಿರುವವರು : ಎಸ್.ವಿ. ಸುಂಕನೂರ (ಬಿಜೆಪಿ), ಆರ್.ಎಂ. ಕುಬೇರಪ್ಪ ( ಕಾಂಗ್ರೆಸ್), ಶಿವಶಂಕರ ಕಲ್ಲೂರ (ಜೆಡಿಎಸ್), ಬಸವರಾಜ ಗುರಿಕಾರ (ಪಕ್ಷೇತರ), ಶಿವರಾಜ ಕಾಂಬಳೆ (ಕರ್ನಾಟಕ ರಾಷ್ಟ್ರ ಸಮಿತಿ), ಸೋಮಶೇಖರ್ ಉಮಾರಾಣಿ (ಶಿವಸೇನಾ).