ಬೆಂಗಳೂರು : ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕಾಗಿ ಇದೇ ತಿಂಗಳು ಎರಡನೇ ವಾರ ನಡೆಯುವ ಆನ್ಲೈನ್ ಸ್ಪರ್ಧೆಯಲ್ಲಿ 16 ಯುವ ಮುಖಂಡರು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಕಾಲಾವಧಿ ಮುಗಿದಿರುವ ಹಿನ್ನೆಲೆ 9 ತಿಂಗಳು ವಿಳಂಬವಾಗಿ ಚುನಾವಣೆ ನಡೆಯುತ್ತಿದೆ. ತೆಲಂಗಾಣ ಮಾದರಿಯಲ್ಲಿ ಆನ್ಲೈನ್ ಮೂಲಕ ಮತದಾನಕ್ಕೆ ಅವಕಾಶ ನೀಡಿ ಅಧ್ಯಕ್ಷರ ಆಯ್ಕೆಗೆ ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಏಳು ಪ್ರಭಾವಿ ರಾಜಕಾರಣಿಗಳ ಕುಟುಂಬದ ಕುಡಿಗಳೂ ಸೇರಿದಂತೆ ಒಟ್ಟು 16 ಮಂದಿ ತಮ್ಮ ಭವಿಷ್ಯವನ್ನು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರೂಪಿಸಿಕೊಳ್ಳಲು ಮುಂದಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಕಾರ್ಯ ಡಿಸೆಂಬರ್ 30ರಂದು ನಡೆದಿದೆ. ಜನವರಿ 3 ರಿಂದ 15 ರವರೆಗೆ ಆನ್ ಲೈನ್ ಮೂಲಕ ಮತದಾನ ನಡೆಯಲಿದೆ.16 ಮಂದಿ ಕಣದಲ್ಲಿರುವ ಅಖಾಡದಲ್ಲಿ ಎಂ.ಎಸ್. ರಾಮಯ್ಯ ವಂಶದ ಕುಡಿ ಹಾಗೂ ಮಾಜಿ ಸಚಿವ ಎಂ.ಆರ್. ಸೀತಾರಾಮ್ ಪುತ್ರ ರಕ್ಷ ರಾಮಯ್ಯ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ 2018ರ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಸ್. ಮಂಜುನಾಥ್, ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಯುವ ರಾಜಕಾರಣಿ ಮಿಥುನ್ ರೈ, ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಯುವ ಕಾಂಗ್ರೆಸ್ ನಾಯಕಿ ಭವ್ಯ ಅವರ ನಡುವೆ ತೀವ್ರ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.
ಓದಿ : ರಾಜ್ಯ ಕಾಂಗ್ರೆಸ್ ನಾಯಕರಿಂದ ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಸಲ್ಲಿಕೆ
ಯುವ ಕಾಂಗ್ರೆಸ್ ಅಧ್ಯಕ್ಷರಾಗುವ ರೇಸ್ನಲ್ಲಿರುವ 16 ಅರ್ಹ ಅಭ್ಯರ್ಥಿಗಳನ್ನು ಖುದ್ದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಸಂದರ್ಶನ ಮಾಡಿ ಅಂತಿಮಗೊಳಿಸಿದ್ದಾರೆ. ಕ್ರಮವಾಗಿ ಅರ್ಹತೆ ಸಂಪಾದಿಸಿದ ಅಭ್ಯರ್ಥಿಗಳೆಂದರೆ ಭವ್ಯ ಕೆ.ಆರ್., ಹನುಮ ಕಿಶೋರ್, ಈರಣ್ಣ ಜಳಕಿ, ಖಾಲಿದ್ ಎಂಡಿ, ಮಂಜುನಾಥ್ ಎಚ್.ಎಸ್., ಮಿಥುನ್ ರೈ, ಎಂ.ಡಿ. ನಲಪಾಡ್, ಎಂ.ಎಸ್. ಆನಂದ್ ಕುಮಾರ್, ಪುಷ್ಪಲತಾ ಸಿ.ಬಿ., ರಕ್ಷ ರಾಮಯ್ಯ, ಸುದೀಪ್ ನಾಯ್ಕ್, ಶಿವಕುಮಾರ್ ಕೆ., ಸೌಮಿಯಾ ತಬೇಜ್, ಸ್ವಾತಿ ಮಾಳಗಿ, ವಿಜಯ್ ಆನಂದ್, ವಿಶ್ವನಾಥ್.