ಬೆಂಗಳೂರು: ಅಧಿಕಾರದ ಅವಧಿ ಮುಕ್ತಾಯವಾಗಿರುವ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಹಾಗೂ 57 ಗ್ರಾಮ ಪಂಚಾಯತ್ಗಳಿಗೆ ರಾಜ್ಯ ಚುನಾವಣಾ ಆಯೋಗ ಇಂದು ಚುನಾವಣೆ ದಿನಾಂಕ ಘೋಷಣೆ ಮಾಡಿದೆ.
ಡಿಸೆಂಬರ್ 27 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಮತ್ತು ಗ್ರಾಮ ಪಂಚಾಯತ್ಗಳಿಗೆ ಡಿಸೆಂಬರ್ 13 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಡಿ.17 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿ.18 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಡಿ.20 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದ್ದು, ಅಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಡಿ.29 ರಂದು ಅಗತ್ಯವಿದ್ದರೆ ಮರು ಮತದಾನ ನಡೆಸಲಾಗುತ್ತದೆ. ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚಿಕ್ಕಮಗಳೂರು, ಗದಗ-ಬೆಟಗೇರಿ, ಹೊಸಪೇಟೆ ಮತ್ತು ಶಿರಾ ನಗರಸಭೆ ಹಾಗೂ ಅಥಣಿ, ಅಣ್ಣಿಗೇರಿ, ಬಂಕಾಪುರ ಪುರಸಭೆಗಳಿಗೆ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆ ಮಾಡಿ ವಾರ್ಡ್‌ವಾರು ಮೀಸಲಾತಿಯನ್ನು 2019 ರಲ್ಲಿ ನಿಗದಿಪಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಆದರೆ, ಮೀಸಲಾತಿ ಅಧಿಸೂಚನೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಡಿಸೆಂಬರ್ ತಿಂಗಳೊಳಗೆ ಮುಕ್ತಾಯಗೊಂಡಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಈ ಆದೇಶದ ಮೇರೆಗೆ ಸರ್ಕಾರವು ವಾರ್ಡ್‌ವಾರು ಅಂತಿಮ ಮೀಸಲಾತಿಯನ್ನು ನಿಗದಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕ್ರಮವಾಗಿ 2 ಲಕ್ಷ ರೂ., 1.50 ಲಕ್ಷ ರೂ. ಮತ್ತು 1 ಲಕ್ಷ ರೂ. ಚುನಾವಣಾ ವೆಚ್ಚ ಮಾಡಲು ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ ಎಂದು ಆಯೋಗ ಹೇಳಿದೆ.
ಗ್ರಾಮ ಪಂಚಾಯತ್ ಚುನಾವಣೆ :
2021 ರ ಜೂನ್ ತಿಂಗಳಿನಿಂದ 2022 ರವರೆಗೆ ಅವಧಿ ಮುಕ್ತಾಯವಾಗಿರುವ ಮತ್ತು ಮುಕ್ತಾಯವಾಗುವ 44 ಗ್ರಾ. ಪಂ.ಗಳಿಗೆ ಹಾಗು ವಿವಿಧ ಕಾರಣಗಳಿಂದಾಗಿ ಚುನಾವಣೆ ನಡೆಯದೆ ಬಾಕಿ ಇದ್ದ 13 ಗ್ರಾಮ ಪಂಚಾಯತ್ ಸೇರಿ ಒಟ್ಟು 57 ಗ್ರಾಮ ಪಂಚಾಯತ್ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲಾಗುತ್ತದೆ. ಅಲ್ಲದೇ, ವಿವಿಧ ಪಂಚಾಯತ್ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 386 ಸ್ಥಾನಗಳಿಗೆ ಉಪಚುನಾವಣೆಯನ್ನು ಸಹ ನಡೆಸಲಾಗುವುದು. ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಚುನಾವಣೆಯ ಎಲ್ಲಾ ಹಂತದಲ್ಲಿಯೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.