ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಗುರುವಾರ ಪೂರ್ವ ತಯಾರಿಯಾಗಿ ವಿಕಾಸಸೌಧದಲ್ಲಿ ರಾಜ್ಯದ ರಾಜಕೀಯ ಪಕ್ಷಗಳ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿತು. ರಾಜ್ಯದಲ್ಲಿ ಚುನಾವಣೆ ಪೂರ್ವ ತಯಾರಿ ಪರಿಶೀಲನೆ ನಡೆಸಲು ನಗರಕ್ಕೆ ಆಗಮಿಸಿರುವ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ತಂಡ ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿತು.
ವಿಕಾಸಸೌಧದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಜತೆ ಸುಮಾರು ಎರಡೂವರೆ ಗಂಟೆಗಳ ಕಾಲ ಭಾರತದ ಚುನಾವಣಾ ಆಯುಕ್ತರು ಸುದೀರ್ಘ ಸಮಾಲೋಚನೆ ನಡೆಸಿದರು. ಈ ವೇಳೆ ರಾಜಕೀಯ ಪಕ್ಷಗಳಿಂದ ಹಲವು ಸಲಹೆ, ಅಭಿಪ್ರಾಯಗಳು ವ್ಯಕ್ತಪಡಿಸಿದವು. ಮಧ್ಯಾಹ್ನ 2.30ಕ್ಕೆ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಜೊತೆ ಸಭೆ ಆರಂಭಿಸಿತು. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಜೊತೆ ಆರಂಭಗೊಂಡು ಬಿಎಸ್ಪಿ, ಬಿಜೆಪಿ, ಸಿಪಿಐ, ಸಿಪಿಐ(ಎಂ), ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್, ನ್ಯಾಷನಲ್ ಪೀಪಲ್ಸ್ ಪಾರ್ಟಿ ಕೊನೆಯದಾಗಿ ಜೆಡಿಎಸ್ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿತು. ಈ ವೇಳೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವು.
ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಅನೂಪ್ ಚಂದ್ರಪಾಂಡೆ, ಅರುಣ್ ಗೋಯಲ್ ಮತ್ತು ಉಪ ಆಯುಕ್ತರು ಸೇರಿದಂತೆ ಆಯೋಗದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸೇರಿದಂತೆ ರಾಜ್ಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಚುನಾವಣಾ ಆಯೋಗ ಮೂರು ದಿನಗಳ ಕಾಲ ನಿರಂತರ ಸಭೆಗಳನ್ನು ನಡೆಸಿ ರಾಜ್ಯದಲ್ಲಿ ಸಿದ್ದತೆ ಮತ್ತು ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಳ್ಳಲಿದೆ.
ಮುಕ್ತ, ಪಾರದರ್ಶಕ ಚುನಾವಣೆಗೆ ಕಾಂಗ್ರೆಸ್ ಮನವಿ: ವಿಎಸ್ ಉಗ್ರಪ್ಪ ಹಾಗೂ ಕಾಂಗ್ರೆಸ್ ಪರಿಷತ್ ಸದಸ್ಯ ಪಿಆರ್ ರಮೇಶ್ ಕಾಂಗ್ರೆಸ್ ಪರವಾಗಿ ಸಭೆಯಲ್ಲಿ ಪಾಲ್ಗೊಂಡರು. ಬಳಿಕ ಮಾತನಾಡಿದ ವಿಎಸ್ ಉಗ್ರಪ್ಪ, ವಿಧಾನಸಭೆ ಚುನಾವಣೆಯನ್ನು ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸುವಂತೆ ಮನವಿ ಮಾಡಲಾಗಿದೆ. ಮತಪಟ್ಟಿಯಲ್ಲಿ ಹೆಸರು ಕೈಬಿಟ್ಟ ಬಗ್ಗೆ ಮಾಹಿತಿ ನೀಡಿದ್ದೇವೆ. ಕೈಬಿಟ್ಟ 33 ಲಕ್ಷ ಮತದಾರರನ್ನು ಸೇರ್ಪಡೆ ಮಾಡಬೇಕು. ಚಿಲುಮೆ ಸಂಸ್ಥೆ ನಡೆಸಿರುವ ಅಕ್ರಮದ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ. ಚಿಲುಮೆ ಅಕ್ರಮದ ತನಿಖಾ ವರದಿಯನ್ನು ಬಹಿರಂಗ ಪಡಿಸಬೇಕು ಎಂಬುದಾಗಿ ಮನವಿ ಮಾಡಲಾಗಿದೆ ಎಂದರು.
ಮತ ಸೆಳೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪದೇ ಪದೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಮತ್ತು ತರಾತುರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಈ ಹಿನ್ನೆಲೆ ತಕ್ಷಣ ನೀತಿ ಸಂಹಿತೆ ಜಾರಿಗೊಳಿಸಬೇಕು. ಉತ್ತರ ಪ್ರದೇಶ ಮತ್ತು ಗುಜರಾತ್ ಸೇರಿದಂತೆ ಬಿಜೆಪಿ ಗೆಲುವು ಸಾಧಿಸಿದ ರಾಜ್ಯಗಳಲ್ಲಿ ಬಳಕೆ ಮಾಡಿದ್ದ ಇವಿಎಂ ರಾಜ್ಯದಲ್ಲಿ ಬಳಸಬಾರದು ಎಂಬುದಾಗಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
224 ಕ್ಷೇತ್ರದಲ್ಲಿ ಒಂದೇ ಹಂತದಲ್ಲಿ ಚುನಾವಣೆ ಮಾಡಬೇಕು. ಮೂರು ವರ್ಷ ಒಂದೇ ಕಡೆ ಕೆಲಸ ಮಾಡಿದ ಅಧಿಕಾರಿಗಳನ್ನು ಬದಲಾವಣೆ ಮಾಡಬೇಕು. ಡಿಜಿಪಿ ಅವರು ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಅವರನ್ನು ವರ್ಗಾವಣೆ ಮಾಡಬೇಕು. ಅಲ್ಲದೇ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರದ ಖರ್ಚಿನ ಬಗ್ಗೆ ಮಾಹಿತಿ ಪಡೆಯಬೇಕು. ಬೇಕಾಬಿಟ್ಟಿ ಜಾಹೀರಾತಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನೂ ಮೂರು ದಿನ ಪೂರ್ವ ತಯಾರಿ ಸಭೆ: ಈಗಾಗಲೇ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ರಾಜ್ಯಮಟ್ಟದಲ್ಲಿ ಚುನಾವಣಾ ಪೂರ್ವ ತಯಾರಿ ಕುರಿತು ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಶುಕ್ರವಾರ ರಾಜ್ಯದ 34 ಜಿಲ್ಲಾ ಚುನಾವಣಾಧಿಕಾರಿಗಳ ಜತೆ ಚುನಾವಣೆಯ ಪೂರ್ವಭಾವಿ ತಯಾರಿ ಕುರಿತು ಸಭೆ ನಡೆಸಲಾಗುವುದು. ಸಂಜೆ ಐಐಎಸ್‌ಸಿ ಆವರಣದಲ್ಲಿನ ಟಾಟಾ ಸಭಾಂಗಣದಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮತ್ತು ಬಿಬಿಎಂಪಿ ವತಿಯಿಂದ ಹಮ್ಮಿಕೊಂಡಿರುವ ಮತದಾರರ ಜಾಗೃತಿ ಕುರಿತು ವಿಶೇಷ ವಸ್ತು ಪ್ರದರ್ಶನ, ವಾಕಥಾನ್ ಉದ್ಘಾಟಿಸಲಾಗುತ್ತದೆ.
ಮತದಾರರ ಜಾಗೃತಿ ಮೂಡಿಸುವ ಎಲ್‌ಇಡಿ ವಾಹನಗಳಿಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚಾಲನೆ ನೀಡಲಿದ್ದಾರೆ. ಬಳಿಕ ವಿಶೇಷ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಚುನಾವಣಾ ರಾಯಭಾರಿಗಳು, ವಿದ್ಯಾರ್ಥಿಗಳು, ಅಂಗವಿಕಲರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ರಾಜ್ಯ ಭೇಟಿಯ ಕೊನೆಯ ದಿನವಾದ ಮಾ.11ರಂದು ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮೂರು ದಿನಗಳ ತಮ್ಮ ಭೇಟಿಯ ಕುರಿತು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮೂರುದಿನಗಳ ಸಭೆಯ ವಿವರವನ್ನು ನೀಡಲಿದ್ದಾರೆ.
ಓದಿ: ಸಂಸದೆ ಸುಮಲತಾ ಬಿಜೆಪಿ ಸೇರುವ ಮಾತುಕತೆ ನಡೆದಿದೆ: ಸಿಎಂ ಬೊಮ್ಮಾಯಿ
ಪೊಲೀಸ್ ಅಧಿಕಾರಗಳ ಜೊತೆ ಸಮಾಲೋಚನೆ: ಇನ್ನು ಚುನಾವಣಾ ತಯಾರಿ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ನೇತೃತ್ವದ ಹಿರಿಯ ಅಧಿಕಾರಿಗಳ ತಂಡವು ಇಂದು ಪೊಲೀಸ್ ಅಧಿಕಾರಿಗಳ ಜೊತೆ ವಿಶೇಷವಾಗಿ ಸಮಾಲೋಚನೆ ನಡೆಸಿತು. ನಾಳೆ ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಚುನಾವಣೆಯ ಪೂರ್ವಭಾವಿ ತಯಾರಿ ಕುರಿತು ಸಭೆ ನಡೆಯಲಿದೆ.
ವಿಚಾರ ಸಂಕಿರಣ: ಇಂದು ಸಂಜೆ ಹೋಟೆಲ್ ತಾಜ್ ವೆಸ್ಟೆಂಡ್ನಲ್ಲಿ 'ಪ್ರಜಾಪ್ರಭುತ್ವದ ಒಳಗೊಳ್ಳುವಿಕೆ ಮತ್ತು ಸಮಗ್ರತೆ' ವಿಷಯದ ಕುರಿತ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಯಿತು. ವಿವಿಧ ಪ್ರಜಾಪ್ರಭುತ್ವ ದೇಶಗಳ ಚುನಾವಣಾ ಆಯುಕ್ತರುಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು.