ಬೆಂಗಳೂರು: ಜಾತಿ, ಧರ್ಮದ ಆಧಾರದಲ್ಲಿ ಕೆಲ ಸಮುದಾಯದ ಜನರ ಹೆಸರುಗಳನ್ನು ಮತಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸ್ಪಷ್ಟನೆ ನೀಡಿದ್ದಾರೆ.
ನಿರ್ದಿಷ್ಟ ಸಮುದಾಯಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಕೆಲ ಮಾಧ್ಯಮಗಳ ವರದಿ ಸುಳ್ಳು. ಮತದಾರರ ಪಟ್ಟಿ ಯಾರೊಬ್ಬರ ಜಾತಿ, ಧರ್ಮದ ಮಾಹಿತಿಯನ್ನು ಹೊಂದಿಲ್ಲ. ನಿಧನರಾದ, ಸ್ಥಳಾಂತರಗೊಂಡವರ ಹೆಸರುಗಳನ್ನು ನಿಯಮದಂತೆ ಡಿಲೀಟ್ ಮಾಡಲಾಗಿದೆ. ಒಂದೇ ವ್ಯಕ್ತಿಗೆ ಅನೇಕ ಹೆಸರಿರುವ ಸಾಧ್ಯತೆಯ ಬಗ್ಗೆ ಸಾಫ್ಟ್‌ವೇರ್ ಬಳಸಿ ಪತ್ತೆ ಮಾಡಲಾಗುತ್ತಿದೆ. ಅಂತಹ ಪ್ರಕರಣಗಳಲ್ಲಿ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ 2023 ಮತದಾರರ ಪಟ್ಟಿಯ ಕರಡನ್ನು ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು ಪ್ರಕಟಿಸಲಾಗಿದೆ. ಡಿ.12ರವರೆಗೆ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಹೆಸರು ಬಿಟ್ಟು ಹೋದವರು ಅರ್ಜಿ ಸಲ್ಲಿಸಿ ತಮ್ಮ ಹೆಸರನ್ನು ಸೇರಿಸುವುದು, ಸರಿಪಡಿಸುವುದು, ಹೊಸ ವಿಳಾಸಕ್ಕೆ ಹೆಸರು ಸ್ಥಳಾಂತರಿಸಬಹುದು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: ಮತದಾರರ ಮಾಹಿತಿ ಕಳವು ಆರೋಪ: ತನಿಖೆಗೆ ಚು.ಆಯೋಗ ಸೂಚನೆ
ಈಗಾಗಲೇ ಕಾಂಗ್ರೆಸ್ ಪಕ್ಷ, ಚಿಲುಮೆ ಸಂಸ್ಥೆಯು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಖಾಸಗಿ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಗಂಭೀರ ಆರೋಪ ಮಾಡಿದೆ. ಕೆಪಿಸಿಸಿ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.