ಬೆಂಗಳೂರು: 2020ನೇ ಸಾಲಿನ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ತರಬೇತಿ ನೀಡಲು ಚುನಾವಣಾ ಆಯೋಗ ತೀರ್ಮಾನಿಸಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಚುನಾವಣಾ ಆಯೋಗ, ಗ್ರಾಮ ಪಂಚಾಯತ್ ಪ್ರತಿ ಕ್ಷೇತ್ರಕ್ಕೆ ಹಾಗೂ ಮತಗಟ್ಟೆ ವ್ಯಾಪ್ತಿಗೆ ಪ್ರತ್ಯೇಕವಾಗಿ ಮತದಾರರ ಪಟ್ಟಿಯನ್ನು ತಹಶೀಲ್ದಾರ್ ಅವರು ತಯಾರಿಸಿರುತ್ತಾರೆ. ನಿಮ್ಮ (ಗ್ರಾಪಂ ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ) ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕ್ಷೇತ್ರಗಳ ಮತದಾರರ ಪಟ್ಟಿಯ ಪ್ರತಿಯನ್ನು ಅವರಿಂದ ಪಡೆದುಕೊಳ್ಳತಕ್ಕದ್ದು, ಹಾಗೂ ಮುಂಚಿತವಾಗಿ ಪರಿಶೀಲಿಸಿಕೊಳ್ಳಬೇಕು. ಮತಗಟ್ಟೆಗಳನ್ನು ಖುದ್ದಾಗಿ ಪರಿಶೀಲಿಸಿ ತಹಶೀಲ್ದಾರ್ ಅವರಿಗೆ ವರದಿಯನ್ನು ನೀಡುವುದು ಹಾಗೂ ಮತಗಟ್ಟೆ ಸಮೀಪದ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಳ್ಳಬೇಕು.
ಚುನಾವಣಾ ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ನೀಡಿರುವ ಆಯೋಗ, ಮತದಾನ ಕೇಂದ್ರಗಳ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ತಯಾರಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯುವ ಜವಾಬ್ದಾರಿ ತಹಶೀಲ್ದಾರ್ ಅವರದ್ದಾಗಿರುತ್ತದೆ. ಚುನಾವಣಾಧಿಕಾರಿಯು ಸಂಬಂಧಪಟ್ಟ ಗ್ರಾಮ ಪಂಚಾಯತ್ನಲ್ಲಿ ಮತದಾನ ಕೇಂದ್ರಗಳ ಪಟ್ಟಿಯನ್ನು ಸಹಿಯೊಂದಿಗೆ ಪ್ರಕಟಿಸಬೇಕು. ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸ್ವೀಕೃತಿಯ ದಿನದಿಂದ ಮತ ಎಣಿಕೆಯವರೆಗೆ ಹಾಗೂ ಎಣಿಕೆ ನಂತರದ ವರದಿಯನ್ನು ಸಲ್ಲಿಸುವ ಸಂಬಂಧ ಎಲ್ಲಾ ಅಗತ್ಯ ಪತ್ರ, ನಮೂನೆ ಲಕೋಟೆ, ಇತ್ಯಾದಿಗಳನ್ನು ತಹಶೀಲ್ದಾರ್ ಅವರಿಂದ ಸಂಗ್ರಹಿಸಿಕೊಳ್ಳಬೇಕೆಂದು ತಿಳಿಸಲಾಗಿದೆ.
ಚುನಾವಣಾ ಅಧಿಸೂಚನೆ
ಪತ್ರ 2 ರಲ್ಲಿ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸುವರು, ಅದೇ ದಿನ ಪತ್ರ 3ರಲ್ಲಿ ಚುನಾವಣಾಧಿಕಾರಿಗಳು ಚುನಾವಣಾ ನೋಟೀಸನ್ನು ಹೊರಡಿಸಬೇಕು. ಪತ್ರ 3 ರಲ್ಲಿ ಚುನಾವಣಾ ನೋಟೀಸನ್ನು ಹೊರಡಿಸುವಾಗ ಜಿಲ್ಲಾಧಿಕಾರಿಗಳು ಪತ್ರ 2ರ ಅಧಿಸೂಚನೆ ಮತ್ತು ಪ್ರತಿ ಕ್ಷೇತ್ರಕ್ಕೆ ಮೀಸಲಾತಿಯನ್ನು ನಿಗದಿಪಡಿಸಿ ಹೊರಡಿಸಿರುವ ಅಧಿಸೂಚನೆಗೆ ಅನುಗುಣವಾಗಿ ಯಾವುದೇ ತಪ್ಪುಗಳಾಗದಂತೆ ಹೊರಡಿಸತಕ್ಕದ್ದು. ಚುನಾವಣಾ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ನಿಗದಿ ಮಾಡಿದ ಕೊನೆಯ ದಿನಾಂಕದವರೆಗೆ (ಎರಡು ದಿನಾಂಕಗಳೂ ಸೇರಿದಂತೆ) ಸಾರ್ವತ್ರಿಕ ರಜೆ ದಿನಗಳನ್ನು ಹೊರತುಪಡಿಸಿ ಪಡೆಯಬೇಕು ( ಉಮೇದುವಾರ ಅಥವಾ ಸೂಚಕನಿಂದ ಮಾತ್ರ ). ನಾಮಪತ್ರಗಳನ್ನು ಬೆಳಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಮಾತ್ರ ಸ್ವೀಕರಿಸತಕ್ಕದ್ದು ( ಮಧ್ಯೆ ಊಟದ ಬಿಡುವು ತೆಗೆದುಕೊಳ್ಳುವಂತಿಲ್ಲ ). ಅಂತಿಮ ಸಮಯದಲ್ಲಿ ಹೆಚ್ಚಿನ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಲು ಹಾಜರಾದಲ್ಲಿ, ಅಭ್ಯರ್ಥಿಗಳು ನಿಗದಿಪಡಿಸಿದ ಸಮಯದ ಒಳಗಾಗಿ ಚುನಾವಣಾಧಿಕಾರಿಗಳ ಕಚೇರಿಗೆ ಹಾಜರಾಗಿದ್ದಾರೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡು ಪ್ರತಿಯೊಬ್ಬರಿಗೂ ಚುನಾವಣಾಧಿಕಾರಿಗಳ ಸಹಿ ಇರುವ ಸ್ಲಿಪ್ (ಟೋಕನ್) ನೀಡುವುದು. ನಾಮಪತ್ರಗಳ ಸ್ವೀಕೃತಿ ಸಮಯ ಮಧ್ಯಾಹ್ನ 3 ಗಂಟೆ ಎಂದೇ ನಮೂದಿಸಬೇಕು ಎಂದು ತಿಳಿಸಿದೆ.
ನಾಮಪತ್ರ ಸ್ವೀಕಾರ
ನಾಮಪತ್ರ ಪಡೆದ ನಂತರ ಪ್ರತಿ ನಾಮಪತ್ರದ ಮೇಲೆ ಕ್ರಮ ಸಂಖ್ಯೆ ಮತ್ತು ಅದನ್ನು ಸಲ್ಲಿಸಿದ ದಿನಾಂಕ ಮತ್ತು ವೇಳೆಯನ್ನು ನಮೂದಿಸತಕ್ಕದ್ದು. ಅಭ್ಯರ್ಥಿಯು ಸಲ್ಲಿಸುವ ಎಲ್ಲಾ ನಾಮಪತ್ರಗಳಿಗೂ (ಗರಿಷ್ಠ ನಾಲ್ಕು) ಅನುಕ್ರಮವಾಗಿ ಕ್ರಮ ಸಂಖ್ಯೆಯನ್ನು ನೀಡತಕ್ಕದ್ದು. ನಾಮಪತ್ರ ಸ್ವೀಕರಿಸಿದ ತಕ್ಷಣ ಅಭ್ಯರ್ಥಿ/ಸೂಚಕನಿಗೆ ನಾಮಪತ್ರಗಳ ಪರಿಶೀಲನೆಗೆ ನಿಗದಿಪಡಿಸಿದ ದಿನಾಂಕ, ವೇಳೆ ಮತ್ತು ಸ್ಥಳವನ್ನು ತಿಳಿಸುವ ಸೂಚನೆಯನ್ನು ಬರವಣೆಗೆಯಲ್ಲಿ ಕೊಟ್ಟು ಸ್ವೀಕೃತಿಯನ್ನು ಪಡೆಯಬೇಕು. ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಮತ್ತು ಮತಪತ್ರದಲ್ಲಿರುವ ಅಭ್ಯರ್ಥಿಯ ಹೆಸರನ್ನು ಮುದ್ರಿಸುವ ಬಗ್ಗೆ ಅಭ್ಯರ್ಥಿಯ ಹೆಸರಿನ ಕಾಗುಣಿತ ಮತ್ತು ಅದನ್ನು ಬರೆಯುವ ವಿಧಾನವನ್ನು ಬರಹದಲ್ಲಿ ಸಹಿಯೊಂದಿಗೆ ಪಡೆದುಕೊಳ್ಳಬೇಕು. ಅಭ್ಯರ್ಥಿಯು ನಾಮಪತ್ರದೊಂದಿಗೆ ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿಲ್ಲದಿದ್ದಲ್ಲಿ, ಬರವಣಿಗೆಯಲ್ಲಿ ತಿಳುವಳಿಕೆಯನ್ನು ನೀಡುವುದು ಎಂದು ತಿಳಿಸಲಾಗಿದೆ.