ಬೆಂಗಳೂರು: ನಗರದಲ್ಲಿ ಪ್ರತಿನಿತ್ಯ ಸರಾಸರಿ ಎರಡು ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಇಂದು ನಗರದಲ್ಲಿ 10,497 ಪ್ರಕರಣ ದೃಢಪಟ್ಟಿದೆ. ಹೀಗಾಗಿ ಪ್ರತೀ ವಲಯಗಳಲ್ಲೂ ಕಡಿಮೆ ರೋಗ ಲಕ್ಷಣ ಇರುವ ಆರೈಕೆಗಾಗಿ ಸಿಸಿಸಿ ಕೇಂದ್ರ ತೆರೆಯಲು ಎಂಟು ಕಡೆಗಳಲ್ಲಿ ಸ್ಥಳ ನಿಗದಿ ಮಾಡಲಾಗಿದೆ.
ಸ್ಥಳಗಳು...
ಪೂರ್ವ ವಲಯ- ಸರ್ಕಾರಿ ಬಾಲಕರ ಕಲಾ ಕಾಲೇಜು, ಸಾಯಿ ಕಲ್ಯಾಣ ಮಂಟಪ, ದಕ್ಷಿಣ ವಲಯ- ಬೋಷ್ ಸಿಸಿಸಿ, ನ್ಯಾಷನಲ್ ಗೇಮ್ಸ್ ವಿಲೇಜ್, ಪಶ್ಚಿಮ ವಲಯ- ಸರ್ಕಾರಿ ಆಯುರ್ವೇದಿಕ್ ಕಾಲೇಜು, ಬೊಮ್ಮನಹಳ್ಳಿ- ಬ್ಲಾಸಂ ಮಲ್ಟಿಸ್ಪೆಷಾಲಿಟಿ, ವಿಂಟೇಜ್ ಇನ್ ಹೋಟೇಲ್, ರಾಜರಾಜೇಶ್ವರಿ ನಗರ- ನಾರ್ತ್ ಈಸ್ಟರ್ನ್ ಗಲ್ಸ್ ಹಾಸ್ಟೆಲ್, ಯಲಹಂಕ- ಸರ್ಕಾರಿ ಮೆಟ್ರಿಕ್ ಗಲ್ಸ್ ಹಾಸ್ಟೆಲ್, ದಾಸರಹಳ್ಳಿ- ಹೋಟೇಲ್ ರಾಜ್ ವಿಸ್ತಾ ಹೆಸರಘಟ್ಟ, ಮಹದೇವಪುರ - ರಾಧಾ ಹೋಮ್ ಟೆಲ್ ಸ್ಥಳ ಗುರುತಿಸಿದ್ದು, ಸಿಸಿಸಿ ಕೇಂದ್ರಗಳನ್ನು 3 ದಿನದೊಳಗಾಗಿ ತುರ್ತಾಗಿ ಸ್ಥಾಪಿಸಿ, ಅಗತ್ಯವಿರುವ ರೋಗಿಗಳ ಆರೈಕೆ ನೀಡಲು ಬಿಬಿಎಂಪಿ ಆದೇಶಿಸಿದೆ.
ಕೋವಿಡ್ ಸೋಂಕಿತ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬವಾಗುವುದನ್ನು ತಡೆಯಲು ಪ್ರತೀ ವಾರ್ಡ್ಗೆ ಎರಡು ಆ್ಯಂಬುಲೆನ್ಸ್ ಗಳ ವ್ಯವಸ್ಥೆ ಮಾಡುವಂತೆ ವಲಯ ಮಟ್ಟದ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ. ಟ್ರಾವೆಲ್ಸ್ ವರ್ಲ್ಡ್ ಸಂಸ್ಥೆಯೊಂದಿಗೆ ಸೇರಿ ವ್ಯವಸ್ಥೆ ಮಾಡಲು ಗೌರವ್ ಗುಪ್ತಾ ಸೂಚಿಸಿದ್ದಾರೆ.
ಇನ್ನು ಕೋವಿಡ್ ಮೃತದೇಹಗಳನ್ನು ಸುಡುವ ವಿದ್ಯುತ್ ಚಿತಾಗಾರಗಳ ಸಂಖ್ಯೆಯನ್ನು 5 ರಿಂದ 7 ಕ್ಕೆ ಏರಿಕೆ ಮಾಡಲಾಗಿದೆ. ಮೇಡಿ ಅಗ್ರಹಾರ, ಕೂಡ್ಲು, ಪಣತೂರು, ಕೆಂಗೇರಿ, ಸುಮನಹಳ್ಳಿ, ಪೀಣ್ಯ, ಬನಶಂಕರಿ ವಿದ್ಯುತ್ ಚಿತಾಗಾರಗಳಲ್ಲಿ ಕೋವಿಡ್ ಸೋಂಕಿನ ಮೃತದೇಹಗಳ ಅಂತ್ಯಕ್ರಿಯೆಗೆ ಮಾತ್ರ ಕಾಯ್ದಿರಿಸಲಾಗಿದೆ.