ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ದೊರೆತಿದ್ದು, ಇದರಿಂದ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು. 10ನೇ ತರಗತಿವರೆಗೆ ಎರಡು ಮೊಟ್ಟೆ ನೀಡುವ ಕಾರ್ಯಕ್ರಮದಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳಣಿಗೆಗೆ ಸಹಕಾರಿಯಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
![Egg donation program is very helpful for children: Minister Madhu Bangarappa](https://etvbharatimages.akamaized.net/etvbharat/prod-images/08-07-2023/kn-bng-01-minister-madhu-bangrappa-about-budget-extending-giving-eggs-till-10th-standard-students-7210969_08072023151659_0807f_1688809619_691.jpg)
ಸಚಿವ ರಾಮಲಿಂಗಾರೆಡ್ಡಿ ಪ್ರತಿನಿಧಿಸುವ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಮಾಡಿರುವ ಅಭಿವೃದ್ಧಿ ಚಟುವಟಿಕೆಯನ್ನು ವೀಕ್ಷಿಸಿದ ನಂತರ ಆಡುಗೋಡಿ ಸರ್ಕಾರಿ ಶಾಲೆಯಲ್ಲಿ 22 ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಬ್ಯಾಗ್ ಮತ್ತು ಸ್ವೆಟರ್ಗಳನ್ನು ವಿತರಿಸಿ ದಾನಿಗಳನ್ನು ಸನ್ಮಾನಿಸಿ ಮಾತನಾಡಿದ ಮಧು ಬಂಗಾರಪ್ಪ, 8ನೇ ತರಗತಿವರೆಗಿನ ಮಕ್ಕಳಿಗೆ ಒಂದು ಮೊಟ್ಟೆ ನೀಡಲಾಗುತ್ತಿತ್ತು. ಇದೀಗ ಪ್ರೌಢ ಶಾಲೆಗೂ ಈ ಯೋಜನೆ ವಿಸ್ತರಿಸಿ ಎರಡು ಮೊಟ್ಟೆ ವಿತರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸದೃಢವಾದ ದೇಹ ಇದ್ದರೆ ಸದೃಢವಾದ ಮನಸ್ಸು ಇರುತ್ತದೆ ಎಂಬುದನ್ನು ಮನಗಂಡು ಮುಖ್ಯಮಂತ್ರಿಗಳು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂದರು.
![Egg donation program is very helpful for children: Minister Madhu Bangarappa](https://etvbharatimages.akamaized.net/etvbharat/prod-images/08-07-2023/kn-bng-01-minister-madhu-bangrappa-about-budget-extending-giving-eggs-till-10th-standard-students-7210969_08072023151659_0807f_1688809619_439.jpg)
ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ: ರಾಜ್ಯದಲ್ಲಿ 80 ಸಾವಿರಕ್ಕೂ ಅಧಿಕ ಶಾಲೆಗಳಿದ್ದು, ಎಲ್ಲವನ್ನೂ ಸರ್ಕಾರವೇ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ದಾನಿಗಳು, ಸಿ.ಎಸ್.ಆರ್ ವಲಯದಿಂದ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನೆರವು ಹರಿದು ಬರಬೇಕು. ಈ ನಿಟ್ಟಿನಲ್ಲಿ ಸಚಿವ ರಾಮಲಿಂಗಾರೆಡ್ಡಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಹೆಚ್ಚು ಶ್ರಮಪಟ್ಟಿದ್ದಾರೆ. ಶಿಕ್ಷಣ ಸಚಿವರಾಗಿ ತಾವು ಗ್ರಾಮೀಣ ಮಟ್ಟದಲ್ಲೂ ಉತ್ತಮ ವಾತಾವರಣ ಕಲ್ಪಿಸಲು ಪ್ರಯತ್ನಿಸುತ್ತೇನೆ. ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಯಾಗಿ ಪರಿವರ್ತಿಸುತ್ತೇನೆ ಎಂದು ಹೇಳಿದರು.
![Egg donation program is very helpful for children: Minister Madhu Bangarappa](https://etvbharatimages.akamaized.net/etvbharat/prod-images/08-07-2023/kn-bng-01-minister-madhu-bangrappa-about-budget-extending-giving-eggs-till-10th-standard-students-7210969_08072023151659_0807f_1688809619_166.jpg)
ಸರ್ಕಾರಿ ಶಾಲೆಗಳಿಗೆ ಸೌಲಭ್ಯವಷ್ಟೇ ಅಲ್ಲದೇ ಉತ್ತಮ ರೀತಿಯಲ್ಲಿ ವಿದ್ಯಾದಾನ ಮಾಡಬೇಕಾಗಿದೆ. ದುರಸ್ತಿಗೆ ಸಾಕಷ್ಟು ಹಣದ ಅಗತ್ಯವಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಸಂಪನ್ಮೂಲ ದೊರೆಯುವ ವಿಶ್ವಾಸವಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರತಿವರ್ಷ ಬದಲಾವಣೆ ತರಲಾಗುತ್ತಿದೆ. ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡಿ, ಸೂಕ್ತ ಸೌಲಭ್ಯದ ಮೂಲಕ ಕಲಿಕೆಯ ವಾತಾವರಣದಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುವುದು ಎಂದರು.
ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ ಬದಲು ರಾಜ್ಯದಲ್ಲಿ ಸೂಕ್ತ ಶಿಕ್ಷಣ ನೀತಿ ರೂಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ ತಜ್ಞರ ತಂಡ ರಚಿಸಿ ಪ್ರತಿಯೊಂದು ವಿಷಯ, ಅಧ್ಯಾಯಗಳ ಬಗ್ಗೆಯೂ ಚರ್ಚಿಸಿ ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಮ್ಮದು ಗುಣಾತ್ಮಕ ಶಿಕ್ಷಣದತ್ತ ಒಲವು: ಶಿಕ್ಷಣ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡಿಕೊಂಡಿರಲಿ. ಆದರೆ, ನಾವು ಗುಣಾತ್ಮಕ ಶಿಕ್ಷಣದತ್ತ ಒಲವು ಹೊಂದಿದ್ದೇವೆ. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ರಾಜಕೀಯದ ಅಗತ್ಯವಿಲ್ಲ. ಶಿಕ್ಷಣದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ತರುವ ನಿರೀಕ್ಷೆ ಹೊಂದಿದ್ದೇನೆ ಎಂದರು.
![Egg donation program is very helpful for children: Minister Madhu Bangarappa](https://etvbharatimages.akamaized.net/etvbharat/prod-images/08-07-2023/kn-bng-01-minister-madhu-bangrappa-about-budget-extending-giving-eggs-till-10th-standard-students-7210969_08072023151659_0807f_1688809619_996.jpg)
ಈ ಸಂಧರ್ಭದಲ್ಲಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕ್ಷೇತ್ರದ ಶಾಲೆಗಳಲ್ಲಿ ಬದಲಾವಣೆ ತರಲು ತಮಗೆ ಎಲ್ಲಾ ರೀತಿಯ ಸಹಕಾರ ದೊರೆತಿದೆ. ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು, ಶ್ರೀಮಂತ ಕುಟುಂಬದ ಮಕ್ಕಳಿಗೆ ಸಿಗುವ ಹೈಟೆಕ್ ಶಿಕ್ಷಣ ಸೌಲಭ್ಯಗಳು, ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕು ಎನ್ನುವ ಉದ್ದೇಶದಿಂದ 22 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಸಾರ್ವಜನಿಕರ ಸಹಕಾರದಿಂದ ಅಭಿವೃದ್ದಿ ಪಡಿಸಲಾಗಿದೆ ಎಂದು ತಿಳಿಸಿದರು.
![Egg donation program is very helpful for children: Minister Madhu Bangarappa](https://etvbharatimages.akamaized.net/etvbharat/prod-images/08-07-2023/kn-bng-01-minister-madhu-bangrappa-about-budget-extending-giving-eggs-till-10th-standard-students-7210969_08072023151659_0807f_1688809619_546.jpg)
ಮಕ್ಕಳು ದೇವರ ಸಮಾನ, ತಾರತಮ್ಯ ಮಾಡುವುದು ಸರಿಯಲ್ಲ. ಈ ಹಿನ್ನೆಲೆ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಸಲಕರಣೆಗಳು ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಶಾಸಕ ನಿಧಿಯ ಅನುದಾನ ಮತ್ತು ದಾನಿಗಳ, ಬಿಟಿಎಂ ಕ್ಷೇತ್ರದ ಜನರ ಸಹಕಾರದಿಂದ ಇದೆಲ್ಲವು ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು. ಸಮಾರಂಭದಲ್ಲಿ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎಂ. ನಾಗರಾಜು, ಮಾಜಿ ಪಾಲಿಕೆ ಸದಸ್ಯರು, ದಾನಿಗಳು ಮತ್ತಿತರರು ಉಪಸ್ಥಿತರಿದ್ದರು.
![Egg donation program is very helpful for children: Minister Madhu Bangarappa](https://etvbharatimages.akamaized.net/etvbharat/prod-images/08-07-2023/kn-bng-01-minister-madhu-bangrappa-about-budget-extending-giving-eggs-till-10th-standard-students-7210969_08072023151659_0807f_1688809619_328.jpg)
ಇದನ್ನೂ ಓದಿ: 667 ಸರ್ಕಾರಿ ಪ್ರೌಢಶಾಲೆಗಳು ಪದವಿಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೆ : ಸಚಿವ ಮಧು ಬಂಗಾರಪ್ಪ