ಮಹಾಮಾರಿ ಕೋವಿಡ್ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದ್ರಿಂದ ಶಿಕ್ಷಣ ಕ್ಷೇತ್ರ ಕೂಡ ಹೊರತಲ್ಲ. ಲಸಿಕೆ ಅಭಿಯಾನ ಆರಂಭವಾದ ನಂತರ ಎಲ್ಲ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ಇದೀಗ ಹಂತಹಂತವಾಗಿ ಶಾಲಾ - ಕಾಲೇಜುಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚಿಸುವತ್ತ ಶಿಕ್ಷಣ ಸಂಸ್ಥೆಗಳು ಗಮನ ಹರಿಸಿದೆ.
ಕ್ಲಸ್ಟರ್ಗಳಲ್ಲಿ ಹೆಚ್ಚಿದ ಭೀತಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಕ್ಲಸ್ಟರ್ಗಳು ಹೆಚ್ಚಿದ ಹಿನ್ನೆಲೆ ವಿದ್ಯಾರ್ಥಿಗಳು ಸೇರಿದಂತೆ ಪೋಷಕರಲ್ಲಿ ಕೊಂಚ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆಗಳನ್ನು ನಡೆಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ. ಕೋವಿಡ್ ನಿಯಮ ಪಾಲನೆ ಕಡ್ಡಾಯಗೊಳಿಸಿದ್ದು, ಇದರ ಪರಿಶೀಲನೆಗಾಗಿ ಜಿಲ್ಲಾವಾರು ತಂಡಗಳನ್ನೂ ಕೂಡ ರಚಿಸಲಾಗಿದೆ.
6 ರಿಂದ 10ನೇ ತರಗತಿವರೆಗೆ ರೆಗ್ಯುಲರ್ ಕ್ಲಾಸ್ ನಡೆಯುತ್ತಿದ್ದು, ಇದರಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ತೃಪ್ತಿದಾಯಕವಾಗಿದೆ. ಹಲವೆಡೆ ಶೇ.70 ರಷ್ಟು ಹಾಜರಾತಿ ಇದ್ದು, ಇನ್ನು ಕೆಲವು ಜಿಲ್ಲೆಯಲ್ಲಿ ಶೇ. 90 ರಷ್ಟು ಹಾಜರಾತಿ ಇದೆ. 6, 7 ಮತ್ತು 8ನೇ ತರಗತಿಯ ಹಾಜರಾತಿ ಪ್ರಮಾಣ ಮುಂಬರುವ ದಿನಗಳಲ್ಲಿ ಹೆಚ್ಚುವ ನಿರೀಕ್ಷೆಯಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ತಿಳಿಸಿದರು.
ಗಣಿನಾಡಲ್ಲಿ ಹೆಚ್ಚಿದ ಹಾಜರಾತಿ ಪ್ರಮಾಣ
ಗಣಿನಾಡು ಬಳ್ಳಾರಿ ಜಿಲ್ಲೆ ಮತ್ತು ನೂತನ ವಿಜಯನಗರ ಜಿಲ್ಲೆಯಲ್ಲಿ ಗಣನೀಯವಾಗಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚಿರುವುದು ಆಶಾದಾಯಕ ಬೆಳವಣಿಗೆ. ಕೋವಿಡ್ ಪೂರ್ವದಲ್ಲಿ ಕೇವಲ ಶೇ.45 ರಷ್ಟು ಮಾತ್ರ ಹಾಜರಾತಿ ಪ್ರಮಾಣ ಇತ್ತಾದರೂ ಇದೀಗ ಶೇಕಡ 90.88ರಷ್ಟು ಹಾಜರಾತಿ ಪಡೆಯುವ ಮೂಲಕ ಇಡೀ ಕಲಬುರಗಿ ವಿಭಾಗೀಯ ಮಟ್ಟದಲ್ಲೇ ಬಳ್ಳಾರಿ - ವಿಜಯನಗರ ಜಿಲ್ಲೆಗಳು ಮೊದಲ ಸ್ಥಾನದಲ್ಲಿವೆ. ಕೋವಿಡ್ ನಿಯಮಗಳ ಪಾಲನೆ ಜೊತೆಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಅಂತಾ ಡಿಡಿಪಿಐ ಸಿ. ರಾಮಪ್ಪ ಮಾಹಿತಿ ನೀಡಿದ್ರು.
ನಿತ್ಯ ಹೋಂ ವರ್ಕ್:
ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಅನುದಾನಿತ, ಅನುದಾನ ರಹಿತ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳ ಸಂಖ್ಯೆ 2,776 ಹಾಗೂ 559 ಪ್ರೌಢಶಾಲೆಗಳಿವೆ. ಸದ್ಯ ಪ್ರಾಥಮಿಕ ಶಾಲೆಯಲ್ಲಿ ಶೇ. 70ರಷ್ಟು ಹಾಜರಾತಿ ಇದ್ದರೆ, ಪ್ರೌಢಶಾಲೆಯಲ್ಲಿ ಶೇ. 80ರಷ್ಟು ಮಕ್ಕಳ ಹಾಜರಾತಿ ಇದೆ. 1 ರಿಂದ 5ನೇ ತರಗತಿಯ ಮಕ್ಕಳಿಗೆ ಶಾಲೆ ಬದಲು ನಿತ್ಯ ಹೋಮ್ ವರ್ಕ್ ನೀಡಲಾಗುತ್ತಿದೆ. ಇದರ ಜತೆಗೆ ಬಿಸಿಯೂಟದ ಆಹಾರಧಾನ್ಯಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ.
ಶಾಲೆಗಳತ್ತ ಮುಖ ಮಾಡಿದ ಸ್ಟುಡೆಂಟ್ಸ್
ವಿದ್ಯಾರ್ಥಿಗಳು ಶಾಲೆಗಳತ್ತ ಮುಖಮಾಡಿದ್ದು, ಅವರ ಆತಂಕವನ್ನು ದೂರ ಮಾಡಿ ಧೈರ್ಯ ತುಂಬುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡುತ್ತಿದೆ. ಜೊತೆಗೆ ಕೋವಿಡ್ ಲಸಿಕೆ ಅಭಿಯಾನದೊಂದಿಗೆ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿವೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಇನ್ನಷ್ಟು ಹೆಚ್ಚುವುದರಲ್ಲಿ ಯಾವುದೇ ಸಂದೇಹವಿಲ್ಲ.