ಬೆಂಗಳೂರು: ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ನಿಗದಿ ಪಡಿಸಿದಂತೆ 60 ರೂಪಾಯಿ ಶುಲ್ಕ ಪಡೆಯಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ ಮತ್ತು ಕೆ.ವಿ ತಿಪ್ಪೇಸ್ವಾಮಿ ನಿಯಮ 330ರ ಸೂಚನಾ ಪತ್ರಕ್ಕೆ ಸಚಿವರು ಉತ್ತರಿಸಿದರು.
ಸರ್ಕಾರದ ಆದೇಶದಲ್ಲಿ 2021ರ ಡಿಸೆಂಬರ್ 6 ರಂದು 2021-22ನೇ ಸಾಲಿನ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಪ್ರತಿ ವಿದ್ಯಾರ್ಥಿಗೆ 60 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಬಳಿಕ 2022ರ ಮಾರ್ಚ್/ಏಪ್ರಿಲ್ ತಿಂಗಳಿನಲ್ಲಿ ನಡೆದ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ 60 ರೂಪಾಯಿಯಂತೆ ಶುಲ್ಕ ಪಡೆದು ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಸದರಿ ಪರೀಕ್ಷೆಗೆ ಸಹ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದಲೇ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿ ರಾಜ್ಯವ್ಯಾಪ್ತಿ ವಿತರಿಸಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಮಂಡಲಿಯಿಂದ ಮಾದರಿ ಪ್ರಶ್ನೆಪತ್ರಿಕೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್ಗೆ ಅಪ್ಲೋಡ್ ಮಾಡಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಬಿಇಒ ಹಂತದಲ್ಲಿಯೇ ಮಾದರಿ ಪ್ರಶ್ನೆ ಪತ್ರಿಕೆಯಂತಹ ವಿಷಯವಾರು ಪ್ರಶ್ನೆ ಪತ್ರಿಕೆಯನ್ನು ಸಿದ್ಧ ಮಾಡಿಕೊಂಡು ಪರೀಕ್ಷಾ ಕಾರ್ಯವನ್ನು ನಡೆಸಲು ಸರ್ಕಾರದ ಆದೇಶ 2023ರ ಜ.25ರಲ್ಲಿ ಆದೇಶಿಸಲಾಗಿದೆ. ಹಾಗೂ 2021-2022ನೇ ಸಾಲಿನಲ್ಲಿ ನಿಗದಿಪಡಿಸಿದ ಶುಲ್ಕವನ್ನೇ ಮುಂದುವರೆಸಿದೆ ಎಂದು ವಿವರಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯವರು ನಡೆಸುತ್ತಿರುವ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಶುಲ್ಕಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ ಹಾಗೂ ತಿಪ್ಪೇಸ್ವಾಮಿ ಪ್ರಶ್ನೆ ಕೇಳಿದ್ದರು. ಇದೇ ವರ್ಷ ಜನವರಿ 25ರ ಅದೇಶದಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ 60 ರೂಪಾಯಿಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆದರೆ, ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಈ ಆದೇಶದಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿದ್ದರು.
ಪರಿಶೀಲನೆಯ ಭರವಸೆ ನೀಡಿದ ಸಚಿವರು: ಅಲ್ಲದೆ, ಈ ಹಿಂದೆ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಶಾಲಾ ಆಡಳಿತ ಮಂಡಳಿಯವರು ಹಾಗೂ ಶಿಕ್ಷಕರ ಸಂಘಟನೆಗಳ ಮುಖಾಂತರ ನಡೆಯುತ್ತಿದ್ದ ಸಂದರ್ಭಗಳಲ್ಲಿ ಕಡಿಮೆ ಶುಲ್ಕ ತೆಗೆದುಕೊಳ್ಳಲಾಗುತ್ತಿತ್ತು. ಅದರಂತೆ ಈ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ನಿಗದಿ ಆಗಿರುವ ಶುಲ್ಕವನ್ನು ಪುನರ್ ಪರಿಶೀಲಿಸಿ ಬಡ ವಿದ್ಯಾರ್ಥಿಗಳಿಗೆ ಅನುಕೂಲಕರ ಆಗುವ ನಿಟ್ಟಿನಲ್ಲಿ ಕಡಿಮೆ ಮಾಡಬೇಕು ಎಂದು ಭೋಜೇಗೌಡ ಹಾಗೂ ತಿಪ್ಪೇಸ್ವಾಮಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದರು. ಆದರೆ, ವಿವರಣೆ ನೀಡಿದ ಸಚಿವರು, ಸದ್ಯ ಶುಲ್ಕ ಇಳಿಕೆ ಅಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಭರವಸೆ ನೀಡಿದ್ದಾರೆ.
ವಂದನಾರ್ಪಣೆ ಪ್ರಸ್ತಾವ : 2023ನೇ ಸಾಲಿನ ಫೆಬ್ರುವರಿ 10 ರಂದು ರಾಜ್ಯಪಾಲರು ವಿಧಾನ ಮಂಡಲದಲ್ಲಿ ಶಾಸಕರನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕಾಗಿ ವಿಧಾನ ಪರಿಷತ್ ಸದಸ್ಯರು ರಾಜ್ಯಪಾಲರಿಗೆ ಕೃತಜ್ಞತಾ ಪೂರ್ವಕವಾದ ವಂದನೆಗಳನ್ನು ಅರ್ಪಿಸುವ ವಂದನಾರ್ಪಣ ನಿರ್ಣಯವನ್ನು ಬಿಜೆಪಿ ಸದಸ್ಯೆ ಡಾ. ತೇಜಸ್ವಿನಿ ಗೌಡ ಸದನದಲ್ಲಿ ಪ್ರಸ್ತಾಪಿಸಿದರು. ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಅದನ್ನು ಅನುಮೋದಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ತೇಜಸ್ವಿನಿ ಗೌಡ ರಾಜ್ಯ ಸರ್ಕಾರದ ಸಾಧನೆಯನ್ನು ಕೊಂಡಾಡಿದರು. ಬೆರಳೆಣಿಕೆಯಷ್ಟಿದ್ದ ಸದಸ್ಯರು ಇದನ್ನು ವೀಕ್ಷಿಸಿದರು. ತೇಜಸ್ವಿನಿ ಅವರ ಮಾತು ಮುಗಿದ ಬಳಿಕ ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಸದನವನ್ನು ನಾಳೆ ಬೆಳಗ್ಗೆ 10.30 ಗಂಟೆಗೆ ಮುಂದೂಡಿದರು.
ಇದನ್ನೂ ಓದಿ: ಶಿವಲಿಂಗೇಗೌಡರು ಡಬಲ್ ಮೂಡ್ನಲ್ಲಿದ್ದಾರೆ ಎಂದ ಸಿ.ಟಿ.ರವಿ: ನಾನು ಅಭಿಮನ್ಯು ಆಗಲ್ಲ, ಅರ್ಜುನ ಆಗುತ್ತೇನೆಂದ ಶಿವಲಿಂಗೇಗೌಡ