ಬೆಂಗಳೂರು: ರಾಜ್ಯದಲ್ಲಿ ಶಾಲೆಗಳ ಪುನಾರಾರಂಭ ಡಿಸೆಂಬರ್ ಅಂತ್ಯದವರೆಗೆ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಆದರೆ ಇತ್ತ 1 ರಿಂದ 8ನೇ ತರಗತಿಯವರೆಗೆ ಈ ವರ್ಷ ಶಾಲೆಗಳನ್ನು ತೆರೆಯದಿರುವ ಸರಕಾರದ ನಿರ್ಧಾರ ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆ ಹಾಗು ಮಕ್ಕಳ ವಿರೋಧಿ ನಿರ್ಧಾರ ಅಂತ ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಈ ನಿರ್ಧಾರ ತುಂಬಾ ದುರದೃಷ್ಟಕರ. ಸ್ಪಷ್ಟವಾಗಿ ಇದು ಬಡ ಮತ್ತು ಹಿಂದುಳಿದ ಸಮುದಾಯಗಳು ಮತ್ತು ಅವರ ಮಕ್ಕಳ ಹಿತಾಸಕ್ತಿ ಹಾಗೂ ಬೆಳವಣಿಗೆಗೆ ವಿರುದ್ಧವಾದ ನಿರ್ಧಾರವಾಗಿದೆ. ಜೊತೆಗೆ ಮುಖ್ಯ ಮಂತ್ರಿಯವರು ಸಂಬಂಧಪಟ್ಟ ಶಿಕ್ಷಣ ಸಚಿವರನ್ನು ಮೂಲೆಗುಂಪು ಮಾಡುವ ಮೂಲಕ ಎಲ್ಲಾ ನಿರ್ಧಾರಗಳನ್ನು ಅವರೇ ಏಕೆ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಇದರ ಹಿಂದಿರುವ ಒತ್ತಡ ಯಾವುದು ಎಂಬುದೇ ದೊಡ್ಡ ರಹಸ್ಯವಾಗಿದೆ.
ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವ ಮತ್ತು ರಕ್ಷಿಸುವ ಪ್ರಾಥಮಿಕ ಬಾಧ್ಯತೆಯನ್ನು ಹೊಂದಿರುವ ರಾಜ್ಯ ಸರ್ಕಾರವೇ "ಮಕ್ಕಳ ಹಿತಾಸಕ್ತಿಗೆ" ವಿರುದ್ಧವಾದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ , ಜೀತ ಪದ್ಧತಿ ಮತ್ತು ಮಕ್ಕಳ ಸಾಗಾಣಿಕೆಗೆ ಉತ್ತೇಜನ ನೀಡುವ ನೀತಿ ಅನುಸರಿಸಲು ಹೊರಟಿರುವುದುಖಂಡನೀಯ . ಇದು ಸಂವಿಧಾನದಲ್ಲಿ ಬದುಕುವ ಹಾಗೂ ಶಿಕ್ಷಣದ ಮೂಲ ಭೂತ ಹಕ್ಕಿನ (ಪರಿಚ್ಛೇಧ 21, 21 ಎ ಮತ್ತು 24 ಹಾಗೂ ರಾಜ್ಯ ನಿರ್ದೇಶಕ ತತ್ವಗಳಾದ 39,41,45,46 ಮತ್ತು 47 ) ಮತ್ತು ಮಕ್ಕಳ ಹಕ್ಕುಗಳ ಒಡಂಬಡಿಕೆಯ (ಯುಎನ್‌ಸಿಆರ್‌ಸಿ) ಸ್ಪಷ್ಟ ಉಲ್ಲಂಘನೆಯಾಗಿದೆ. ರಾಜ್ಯ ತನ್ನ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಸ್ಪಷ್ಟ ಉದಾಹರಣೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..