ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರೂ, ರಾಜ್ಯದಲ್ಲಿ 14 ವರ್ಷದೊಳಗಿನ 25 ಸಾವಿರ ಮಕ್ಕಳು ಶಾಲೆಗಳಿಂದ ದೂರ ಉಳಿದಿದ್ದು, 9.8 ಲಕ್ಷ ಮಕ್ಕಳು ಅಂಗನಾಡಿಗಳಿಂದ ದೂರ ಉಳಿದಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಈ ಮಕ್ಕಳನ್ನು ಮರಳಿ ಅಂಗನವಾಡಿ, ಶಾಲೆಗಳಿಗೆ ಕರೆತರಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ತಂತ್ರಾಂಶ ಆಧಾರಿತ ಮಾಹಿತಿ ಸಂಗ್ರಹಣೆ ನಡೆಸುತ್ತಿದೆ.
ಕೋವಿಡ್ ನಂತರ ಶೈಕ್ಷಣಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿದ್ದರೂ ಅಂಗನವಾಡಿ ಮತ್ತು ಶಾಲೆಗಳಿಂದ ದೂರ ಉಳಿದ ಮಕ್ಕಳ ಸಂಖ್ಯೆ ಕಡಿಮೆಯಾಗಿಲ್ಲ. ಜಾಗೃತಿ ಮೂಡಿಸುತ್ತಿದ್ದರೂ ಶಾಲೆಗಳಿಂದ ದೂರ ಉಳಿದ ಮಕ್ಕಳು ಶಾಲೆಗಳತ್ತ ಮರಳಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಶಿಕ್ಷಣ ಇಲಾಖೆ ಇದೀಗ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಅಭಿಯಾನ ಚುರುಕುಗೊಳಿಸಲು ಮುಂದಾಗಿದೆ.
ಶಾಲೆಯಿಂದ ದೂರ ಉಳಿದ ಮಕ್ಕಳ ಅಂಕಿ-ಅಂಶ: ಶಾಲೆಯಿಂದ ದೂರ ಉಳಿದ 6-14 ವರ್ಷದೊಳಗಿನ ಮಕ್ಕಳ ಸಂಖ್ಯೆ: 15,338. ಶಾಲೆಗೆ ದಾಖಲಾಗದೇ ಉಳಿದ 6-14 ವರ್ಷದೊಳಗಿನ ಮಕ್ಕಳ ಸಂಖ್ಯೆ: 10,018. ಅಂಗನವಾಡಿಯಿಂದ ದೂರ ಉಳದ 0-3 ವರ್ಷದೊಳಗಿನ ಮಕ್ಕಳ ಸಂಖ್ಯೆ: 4,54,238. ಅಂಗನವಾಡಿಗೆ ದಾಖಲಾಗಿಲ್ಲದ 4-6 ವರ್ಷದೊಳಗಿನ ಮಕ್ಕಳ ಸಂಖ್ಯೆ: 5,33,206.
ರಾಜ್ಯದಲ್ಲಿ 6-14 ವರ್ಷದೊಳಗಿನ 25 ಸಾವಿರ ಮಕ್ಕಳು ಶಾಲೆಗಳಿಂದ ದೂರ ಉಳಿದಿದ್ದು, 9.8 ಲಕ್ಷ ಮಕ್ಕಳು ಅಂಗನಾಡಿಗಳಿಂದ ದೂರ ಉಳಿದಿದ್ದಾರೆ ಎನ್ನುವ ಮಾಹಿತಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನೀಡಿದೆ. ಈ ಮಕ್ಕಳನ್ನು ಮರಳಿ ಶಾಲೆ ತರಲೆಂದೇ ವಸತಿರಹಿತ ಶಾಲಾಧಾರಿತ ತರಬೇತಿ, ವಸತಿ ಸಹಿತ ಶಾಲಾಧಾರಿತ ತರಬೇತಿ, ಟೆಂಟ್ ಶಾಲಾ ಕಾರ್ಯಕ್ರಮ, ಕೆಕೆಜಿಬಿವಿ ಮತ್ತು ಕೆಜಿಬಿವಿ ವಿದ್ಯಾರ್ಥಿಗಳ ವಸತಿ ಶಾಲೆಗಳ ಯೋಜನೆ, ಋತುಮಾನ ಶಾಲೆ, ಚಿಣ್ಣರ ಅಂಗಳ, ಬಾ ಬಾಲೆ ಶಾಲೆಗೆ, ಬಾ ಮರಳಿ ಶಾಲೆಗೆ, ಪೋಷಕರ ಸಭೆ, ಪಾಲಕರ ಮನೆಗೆ ಭೇಟಿಯಂತಹ ಕಾರ್ಯಕ್ರಮಗಳನ್ನು ಹಾಕಿಕೊಂಡು ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆಗೆ ಮರಳಿ ಕರೆತರಲು ಸರ್ಕಾರ ಪ್ರಯತ್ನ ನಡೆಸಿದೆ.
ವಿಶೇಷ ದಾಖಲಾತಿ ಆಂದೋಲನಾ, ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಮಧ್ಯಾಹ್ನ ಉಪಹಾರ ಯೋಜನೆ, ಕ್ಷೀರಭಾಗ್ಯ, ಶಿಷ್ಯವೇತನ ನೀಡುವ ಮೂಲಕ ಮಕ್ಕಳನ್ನು ಶಾಲೆಗಳ ಕಡೆ ಆಕರ್ಷಿಸಲು ಮುಂದಾಗಿದೆ.
ಸೆಂಟರ್ ಫಾರ್ ಇ ಗವರ್ನೆನ್ಸ್ ಇಲಾಖೆ ವತಿಯಿಂದ ಅಭಿವೃದ್ಧಿ ಪಡಿಸಿರುವ ಕರ್ನಾಟಕ ಹೆಚ್2ಹೆಚ್ ಚಿಲ್ಡ್ರನ್ ಸರ್ವೆ ಆ್ಯಪ್ ಎನ್ನುವ ವಿಶಿಷ್ಟವಾದ ಮೊಬೈಲ್ ಆ್ಯಪ್ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಗಳ ಮೂಲಕ ಮಕ್ಕಳ ಸಮೀಕ್ಷಾ ಕಾರ್ಯ ನಡೆಸಲಾಗಿದೆ.
ಈ ಸಮೀಕ್ಷೆಯ ವರದಿ ಆಧರಿಸಿ ಅಮಿಕಸ್ ಕ್ಯೂರಿ ಅವರು 6-14 ವಯೋಮಾನದ 25,356 ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಮಾಹಿತಿಯನ್ನು ಹೈಕೋರ್ಟ್ಗೆ ಸಲ್ಲಿಸಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾಹಿತಿ ನೀಡಿದ್ದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರತಿದಿನ ಮಕ್ಕಳ ಜಾಡು ಹಿಡಿದು ಶಾಲೆಗೆ ಕರೆತರುವ ಸಲುವಾಗಿ ತಂತ್ರಾಂಶ ಆಧಾರಿತ ಮಾಹಿತಿ ಸಂಗ್ರಹಣೆ ಮಾಡಲಾಗುತ್ತಿದೆ. ಅಲ್ಲದೇ ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಕ್ಕಳಿಗೆ ಶಿಕ್ಷಣ ಮೂಲ ಹಕ್ಕಾಗಿರುವ ಹಿನ್ನೆಲೆಯಲ್ಲಿ ಶಾಲೆಯಿಂದ ದೂರ ಉಳಿದ ಮಕ್ಕಳ ವಿಚಾರವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ ಈ ಹಿನ್ನೆಲೆಯಲ್ಲಿ ಶಾಲೆ, ಅಂಗನವಾಡಿಯಿಂದ ದೂರ ಉಳಿದಿರುವ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಶಿಕ್ಷಣ ಇಲಾಖೆ ಮೇಲಿದ್ದು, ದೂರ ಉಳಿದ ಮಕ್ಕಳ ಹುಡುಕಾಟಕ್ಕೆ ಹರಸಾಹಸ ಪಡುತ್ತಿದ್ದಾರೆ.
ಆರ್ಥಿಕ ಸಮಸ್ಯೆ, ಕೋವಿಡ್ ಕಾರಣದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ಅಧಿಕಾರಿಗಳು ತಂತ್ರಾಂಶ ಆಧಾರಿತ ವ್ಯವಸ್ಥೆ ಮೂಲಕ ಮಕ್ಕಳ ಪತ್ತೆ ಕಾರ್ಯಕ್ಕೆ ಮುಂದಾಗಿದ್ದು, ಇದರಲ್ಲಿ ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ, ಶಾಲೆಯಿಂದ ದೂರ ಉಳಿದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ಹೊಸ ದಾಖಲೆ: ಸಚಿವ ಸಿ.ಸಿ.ಪಾಟೀಲ್