ಬೆಂಗಳೂರು : ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಕಾಲೇಜುಗಳಲ್ಲಿನ ಎರಡನೇ ವರ್ಷದ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಈಗಿರುವ ಪಠ್ಯದ ಜೊತೆಗೆ ಹಣಕಾಸು ಶಿಕ್ಷಣ ಕಲಿಸಲು ರಾಜ್ಯ ಸರಕಾರ ಯೋಜನೆ ರೂಪಿಸಿದೆ.
ಪದವಿ ವಿದ್ಯಾರ್ಥಿಗಳಿಗೆ ಹಣಕಾಸು ಶಿಕ್ಷಣ (ಫೈನಾನ್ಶಿಯಲ್ ಎಜುಕೇಶನ್) ಮತ್ತು ಹೂಡಿಕೆ ಜಾಗೃತಿ (ಇನ್ವೆಸ್ಟ್‌ಮೆಂಟ್ ಅವೇರ್ನೆಸ್) ಎರಡನ್ನೂ ಕಲಿಸುವ ಒಡಂಬಡಿಕೆಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಅಂಗ ಸಂಸ್ಥೆಯಾದ ಎನ್‌ಎಸ್‌ಇ ಅಕಾಡೆಮಿ ಲಿಮಿಟೆಡ್ (ಎನ್‌ಎಎಲ್) ಇಂದು ಪರಸ್ಪರ ಸಹಿ ಹಾಕಿದೆ.
ಈ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಎರಡೂ ಸಂಸ್ಥೆಗಳು ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡವು.
ಇದೇ ಸಂದರ್ಭದಲ್ಲಿ ಎನ್‌ಎಸ್‌ಇ ಅಕಾಡೆಮಿಯು ರಾಜ್ಯದ 20 ವಿಶ್ವವಿದ್ಯಾಲಯಗಳೊಂದಿಗೂ ಒಪ್ಪಂದ ಮಾಡಿಕೊಂಡಿತು. ಈ ಎಲ್ಲ ವಿ.ವಿ.ಗಳ ಕುಲಪತಿಗಳು ಮತ್ತು ರಿಜಿಸ್ಟ್ರಾರ್ಗಳು ಹಾಜರಿದ್ದು, ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಡಾ. ಅಶ್ವತ್ಥನಾರಾಯಣ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕಾಗಿರುವ ನಮ್ಮ ವಿದ್ಯಾರ್ಥಿಗಳಿಗೆ ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಎರಡನ್ನೂ ಕಲಿಕೆಯ ಭಾಗವನ್ನಾಗಿ ಮಾಡುವುದು ಅತ್ಯಗತ್ಯವಾಗಿದೆ.
ಇದರಿಂದ ರಾಜ್ಯದ 5 ಲಕ್ಷ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಲಾಭವಾಗಲಿದೆ. ಮುಖ್ಯವಾಗಿ, ಇದು ಉದ್ಯಮಶೀಲತೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಯುವ ಜನರು ತಮ್ಮನ್ನು ತೊಡಗಿಸಿಕೊಳ್ಳಲು ಸರಿಯಾದ ಪ್ರೇರಣೆ ಆಗಲಿದೆ' ಎಂದು ಹೇಳಿದರು.
ಹಣಕಾಸು ಶಿಕ್ಷಣ, ಹೂಡಿಕೆ ಜಾಗೃತಿ ಕಡ್ಡಾಯ ಕಲಿಕೆ : ಈ ಕೋರ್ಸ್ ಅನ್ನು ಎಲ್ಲ ಪದವಿ ಕಾಲೇಜುಗಳೂ ತಮ್ಮ ಪಠ್ಯಕ್ರಮದ ಭಾಗವನ್ನಾಗಿ ಮಾಡಿಕೊಳ್ಳಬೇಕಾಗಿರುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಕಾಲೇಜುಗಳಿಗೂ ತಿಳಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಉಳಿತಾಯ, ಹೂಡಿಕೆ, ಆರ್ಥಿಕ ತಿಳಿವಳಿಕೆ, ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು ಈ ಬಗ್ಗೆ ಸಮಗ್ರ ಅರಿವು ಮೂಡಿಸಲಾಗುವುದು ಎಂದು ಅವರು ವಿವರಿಸಿದರು.
ಈ ಒಡಂಬಡಿಕೆಯ ಭಾಗವಾಗಿ ಎನ್‌ಎಸ್‌ಇ ಅಕಾಡೆಮಿಯು ಉಪನ್ಯಾಸಕರಿಗೆ ತರಬೇತಿ ಕೊಡಲು ರಾಜ್ಯ ಮಟ್ಟದ `ಟ್ರೈನ್ ದಿ ಟ್ರೈನರ್' ಕಾರ್ಯಕ್ರಮ ಹಮ್ಮಿಕೊಂಡು, ಅಗತ್ಯ ಕೌಶಲ್ಯಗಳನ್ನು ಕಲಿಸಿಕೊಡಲಿದೆ. ಬಳಿಕ, ಬೋಧಕ ವೃಂದದವರು ಇದನ್ನು ತಮ್ಮ ವಿದ್ಯಾರ್ಥಿಗಳಿಗೆ ವರ್ಗಾಯಿಸಲಿದ್ದಾರೆ ಎಂದು ಅವರು ಹೇಳಿದರು.
ಯುವಜನರನ್ನು ಆರ್ಥಿಕ ಬೆಳವಣಿಗೆ ಭಾಗವಾಗಿಸುವ ಉದ್ದೇಶ : ರಾಜ್ಯದ ಯುವಜನರನ್ನು ಉದ್ಯೋಗದಾತರನ್ನಾಗಿ, ಉದ್ಯೋಗಾರ್ಹರನ್ನಾಗಿ ಮತ್ತು ಆರ್ಥಿಕ ಬೆಳವಣಿಗೆಯ ಭಾಗವನ್ನಾಗಿ ಮಾಡಬೇಕು ಎಂಬುದು ಸರ್ಕಾರದ ಹಂಬಲವಾಗಿದೆ. ಇದಕ್ಕಾಗಿ ಉನ್ನತ ಶಿಕ್ಷಣ ಇಲಾಖೆಯಡಿ ಹಲವು ಉಪಯುಕ್ತ ಉಪಕ್ರಮಗಳನ್ನು ಜಾರಿಗೆ ತರಲಾಗಿದೆ.
ಜತೆಗೆ, ಕೌಶಲ್ಯಾಭಿವೃದ್ಧಿ ಇಲಾಖೆಯಿಂದಲೂ ಉದ್ಯೋಗ ಮೇಳ, ಕೌಶಲ್ಯ ಕಲಿಕೆಗಳಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪದವೀಧರರಾಗಿ ಯಾರೊಬ್ಬರೂ ನಿರುದ್ಯೋಗಿಗಳಾಗಿ ಉಳಿಯಬಾರದು ಎನ್ನುವ ದೃಷ್ಟಿಯ ಸಬಲೀಕರಣ ನಮ್ಮದಾಗಿದೆ ಎಂದು ಅಶ್ವತ್ಥನಾರಾಯಣ ಇದೇ ವೇಳೆ ಹೇಳಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಅಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಗೋಪಾಲಕೃಷ್ಣ ಜೋಶಿ, ಎನ್‌ಎಸ್‌ಇ ಇಂಡಿಯಾ ಲಿಮಿಟೆಡ್‌ನ ಪ್ರಧಾನ ಆರ್ಥಿಕ ತಜ್ಞ ಡಾ.ತೀರ್ಥಂಕರ್ ಪಟ್ನಾಯಕ್, ಎನ್‌ಎಸ್‌ಇ ಅಕಾಡೆಮಿ ಲಿಮಿಟೆಡ್‌ನ ಸಿಇಒ ಅಭಿಲಾಷ್ ಮಿಶ್ರ, ಮುಖ್ಯ ವ್ಯವಸ್ಥಾಪಕ ಎಸ್. ರಂಗನಾಥನ್ ಮತ್ತಿತರರು ಉಪಸ್ಥಿತರಿದ್ದರು.
ಓದಿ : ಗವಿಮಠ ವಿದ್ಯಾರ್ಥಿ ನಿಲಯಕ್ಕೆ 1.8 ಕೋಟಿ ದೇಣಿಗೆ ನೀಡಿದ ಆನಂದ್ ಸಿಂಗ್ ಕುಟುಂಬ