ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಕಾಯಿದೆ ಅನ್ವಯ ಎಡಿಜಿಪಿ ಅಮೃತ್ ಪೌಲ್ ಹಾಗೂ ಡಿವೈಎಸ್ಪಿ ಶಾಂತಕುಮಾರ್ ಗೆ ಸಂಬಂಧಿಸಿದ 11 ಸ್ಥಳಗಳಲ್ಲಿ ನಿನ್ನೆ ಪರಿಶೀಲನೆ ಕೈಗೊಂಡಿದ್ದ ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಗಳ ವಿರುದ್ಧ ಪುಷ್ಟಿ ಕೊಡುವ ಡಿಜಿಟಲ್ ಹಾಗೂ ಪತ್ರ ರೂಪದ ದಾಖಲೆಗಳನ್ನು ವಶಕ್ಕೆ ಪಡೆದಿರುವುದಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಆಗಸ್ಟ್ 4ರಂದು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ, ನಿನ್ನೆ ಎಡಿಜಿಪಿ ಅಮೃತ್ ಪೌಲ್ ರ ಬೆಂಗಳೂರು, ಪಟಿಯಾಲದ ನಿವಾಸ, ಆಡುಗೋಡಿಯಲ್ಲಿರುವ ಡಿವೈಎಸ್ಪಿ ಶಾಂತಕುಮಾರ್ ಸರ್ಕಾರಿ ನಿವಾಸ ಸೇರಿದಂತೆ 11 ಕಡೆಗಳಲ್ಲಿ ಪರಿಶೀಲನೆ ನಡೆಸಿತ್ತು.
2021ನೇ ಸಾಲಿನ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಬೆಂಗಳೂರು ಹಾಗೂ ಕಲಬುರಗಿಯ ವಿವಿಧೆಡೆ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆಯಾಗಿತ್ತು. ತನಿಖೆ ಕೈಗೊಂಡಿದ್ದ ಸಿಐಡಿ ಪೊಲೀಸರು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್, ಡಿವೈಎಸ್ಪಿ ಶಾಂತಕುಮಾರ್ ಸಹಿತ ನೂರಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿತ್ತು.
ಹಗರಣದಲ್ಲಿ ಅಭ್ಯರ್ಥಿಗಳಿಂದ ಅಕ್ರಮವಾಗಿ ಹಣ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು.
ಇದನ್ನೂ ಓದಿ : ಪಿಎಸ್ಐ ಹಗರಣ: 8 ದಿನ ಸಿಐಡಿ ಕಸ್ಟಡಿಗೆ ಅಮೃತ್ ಪಾಲ್