ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಡಿ ಮಾಜಿ ಸಚಿವ ಆರ್.ರೋಷನ್ ಬೇಗ್ ಮನೆ ಮೇಲೆ ಇ.ಡಿ ದಾಳಿ ನಡೆಸಿದ್ದು, ಸತತ 28 ಗಂಟೆಗಳ ಬಳಿಕ ಪರಿಶೀಲನೆ ಕಾರ್ಯ ಮುಗಿಸಿದ್ದಾರೆ. ನಿನ್ನೆ ನಿನ್ನೆ ಬೆಳಗ್ಗೆ 6 ಗಂಟೆಗೆ ಆರಂಭಿಸಿದ್ದ ದಾಳಿಯನ್ನು ಅಧಿಕಾರಿಗಳು ಇಂದು ಬೆಳಗ್ಗಿನವರೆಗೂ ಮುಂದುವರಿಸಿದ್ದರು. ಮೂರು ವಾಹನದಲ್ಲಿ 8 ಮಂದಿ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ದಾಖಲಾತಿಯನ್ನು ವಶಕ್ಕೆ ಪಡೆದುಕೊಂಡು ತೆರಳಿದ್ದಾರೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಕುರಿತಾಗಿ ರೋಷನ್ ಬೇಗ್ ಹಾಗೂ ಕುಟುಂಬಸ್ಥರನ್ನು ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಜೊತೆಗೆ ಜಮೀರ್ ಅಹ್ಮದ್ ಖಾನ್ ಜೊತೆಗಿನ ಹಣಕಾಸು ವ್ಯವಹಾರ ಕುರಿತಾಗಿಯೂ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಫ್ರೇಜರ್ ಟೌನ್ ಬೇಗ್ ಮನೆ, ಸಂಜಯನಗರ ಮನೆ, ಭೂಪಸಂದ್ರದ ಮಗಳ ಮನೆ ಹಾಗೂ ಇಂದಿರಾನಗರದಲ್ಲಿನ ಮಗಳ ಮನೆಯಲ್ಲಿಯೂ ದಾಳಿ ನಡೆದಿತ್ತು. ಬೇಗ್‌ಗೆ ಸಂಬಂಧಿಸಿದ ಒಟ್ಟು ನಾಲ್ಕು ಕಡೆಗಳಲ್ಲಿ ಪ್ರತ್ಯೇಕ ತಂಡಗಳಿಂದ ನಿನ್ನೆಯಿಂದ ಪರಿಶೀಲನೆ ನಡೆಸಿತ್ತು. ಬೇಗ್ ಅಳಿಯ ಸಮೀರ್, ಆಪ್ತ ಎಸ್ಸಾನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ಐಎಂಎ ಹಗರಣದಲ್ಲಿ ಬಂಧನವಾಗಿದ್ದ ರೋಷನ್ ಬೇಗ್ ಅನಾರೋಗ್ಯ ಕಾರಣ ನೀಡಿ ಜಾಮೀನು ಪಡೆದಿದ್ದರು. ಇತ್ತೀಚೆಗೆ ಬೇಗ್ ಆಸ್ತಿ ಜಪ್ತಿ ಮಾಡುವಂತೆಯೂ ಹೈಕೋರ್ಟ್ ಆದೇಶ ನೀಡಿತ್ತು. ಬೆನ್ನಲ್ಲೇ ಈಗ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.