ಬೆಂಗಳೂರು: ಖಾಸಗಿ ಕಂಪೆನಿಯೊಂದು ಅಕ್ರಮವಾಗಿ ಕಪ್ಪು ಹಣ ದಂಧೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ನೀಡಿದಕ್ಕಾಗಿ ಬಹುಮಾನ ಕೊಡಲು ನಿರಾಕರಿಸಿದ ಇಡಿ ಅಧಿಕಾರಿಗಳ ತೇಜೋವಧೆಗೆ ಮುಂದಾಗಿದ್ದ ಆರೋಪಿ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಖಾಸಗಿ ಕಂಪೆನಿಯೊಂದು ಕಾನೂನುಬಾಹಿರವಾಗಿ 53 ಕೋಟಿ ರೂ. ಹಣವನ್ನು ಕಪ್ಪು ಹಣವನ್ನಾಗಿ ಪರಿವರ್ತಿಸಿ ಅಕ್ರಮವಾಗಿ ಸಂಪಾದನೆ ಮಾಡುತ್ತಿದೆ ಎಂದು ವ್ಯಕ್ತಿಯೋರ್ವರು ಮಾಹಿತಿ ನೀಡಿದ್ದರು. ಮಾಹಿತಿ ನೀಡಿದರೂ ಬಹುಮಾನ ನೀಡಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿ ಜಾರಿ ನಿರ್ದೇಶನಾಲಯ (ಇಡಿ) ಹಿರಿಯ ಅಧಿಕಾರಿಗಳ ತೇಜೋವಧೆ ಹಾಗೂ ಅಪ್ರಚಾರ ಮಾಡಿದ್ದನು. ಈ ಸಂಬಂಧ ಆತನ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ (ಇಡಿ) ಸಿಬ್ಬಂದಿ ಶೇಷಗಿರಿ ಎಂಬುವವರು ನೀಡಿದ ದೂರು ಆಧರಿಸಿ ದೆಹಲಿ ಮೂಲದ ರಾಕೇಶ್ ಶರ್ಮಾ ವಿರುದ್ಧ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆಲ್ಬಂ ಸಿಸ್ಟಮ್ಸ್ ಇಂಡಿಯಾ ಪ್ರೈವೇಟ್ ಕಂಪನಿ ನಿರ್ದೇಶಕರು ಕಾನೂನು ಬಾಹಿರವಾಗಿ 53 ಕೋಟಿ ರೂ.ಹಣವನ್ನು ಬ್ಲ್ಯಾಕ್ ಮನಿಯಾಗಿ ಮಾರ್ಪಡಿಸಿ ಅಕ್ರಮವಾಗಿ ಸಂಪಾದನೆ ಮಾಡುತ್ತಿರುವ ಗುಮಾನಿ ಹಿನ್ನೆಲೆಯಲ್ಲಿ 2019 ನ.5ರಂದು ಪ್ರಧಾನಿ ಮಂತ್ರಿ ಕಾರ್ಯಾಲಯಕ್ಕೆ ಈ ಮೇಲ್ ಮುಖಾಂತರ ರಾಕೇಶ್ ಶರ್ಮಾ ದೂರು ನೀಡಿದ್ದರು. ದೂರು ಪರಿಶೀಲಿಸಿ ನ.26 ರಂದು ದೂರು ಪರಿಶೀಲಿಸುವಂತೆ ಬೆಂಗಳೂರಿನಲ್ಲಿರುವ ಇಡಿ ಕಚೇರಿಗೆ ಅಧಿಕಾರಿಗಳು ಕಳುಹಿಸಿದ್ದರು. ದೂರು ಸ್ವೀಕರಿಸಿದ ಇಡಿ, ತೆರಿಗೆ ಪಾವತಿ ಹಾಗೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಜರುಗಿಸಲು ನಡೆಸಲು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿತ್ತು.
ಬಳಿಕ ದೂರುದಾರರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿತ್ತು. ತನಿಖಾ ಹಂತದಲ್ಲಿರುವಾಗ ರಾಕೇಶ್, 53 ಕೋಟಿ ಹಣ ಅವ್ಯವಹಾರದ ಬಗ್ಗೆ ಮಾಹಿತಿ ನೀಡಿದಕ್ಕಾಗಿ ಬಹುಮಾನ ನೀಡಬೇಕೆಂದು ಒತ್ತಾಯಿಸಿದ್ದಾನೆ. ಕಾನೂನಿನಡಿ ಯಾವುದೇ ನಗದು ಅಥವಾ ಬಹುಮಾ ನೀಡಲು ಅವಕಾಶವಿಲ್ಲ ಎಂದು ಇಡಿ ಅಧಿಕಾರಿಗಳು ಮನವರಿಕೆ ಮಾಡಿದ್ದರೂ ಮತ್ತೆ ಒತ್ತಡ ಹಾಕುವುದನ್ನು ಮುಂದುವರಿಸಿದ್ದನು.
ಜಾರಿ ನಿರ್ದೇಶನಾಲಯ ವೆಬ್ಸೈಟ್ ಮುಖಾಂತರ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರ ವಿವರ ಸಂಗ್ರಹಿಸಿ ಅಧಿಕಾರಿಗಳ ವೈಯಕ್ತಿಕ ಹೆಸರು ಬಳಸಿ ತಾನು ನೀಡಿದ ದೂರಿನ ಬಗ್ಗೆ ಸರಿಯಾಗಿ ತನಿಖೆ ನಡೆಸದೆ ಬ್ಲಾಕ್ ಮನಿಯಲ್ಲಿ ತೊಡಗಿದ್ದ ಕಂಪೆನಿಯೊಂದಿಗೆ ಶಾಮೀಲಾಗಿ ಕೋಟ್ಯಾಂತರ ರೂ. ಹಣ ಪಡೆದಿದ್ದಾರೆ ಎಂದು ಆರೋಪಿಸಿ ಕೇಂದ್ರದ ವಿವಿಧ ತನಿಖಾ ಸಂಸ್ಥೆಗಳಿಗೆ ಈ-ಮೇಲ್ ಮುಖಾಂತರ ದೂರು ನೀಡುತ್ತಿದ್ದನು. ಬಹುಮಾನ ನೀಡಿಲ್ಲ ಎಂಬ ಕಾರಣಕ್ಕಾಗಿ ಹಿರಿಯ ಅಧಿಕಾರಿಗಳ ತೇಜೋವಧೆ ಮಾಡಿ ಅಪಪ್ರಚಾರ ಮಾಡುತ್ತಿದ್ದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಶೇಷಗಿರಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Shocking! ಹಾಸನದ ಚೌಡನಹಳ್ಳಿಯಲ್ಲಿ 30ಕ್ಕೂ ಹೆಚ್ಚು ಮಂಗಗಳ ಮಾರಣಹೋಮ