ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದ ಕಾರಣ ಸಿಸಿಬಿ ಕಚೇರಿಗೆ ಮೂವರು ED(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಆಗಮಿಸಿದ್ದಾರೆ.
ED ಅಸಿಸ್ಟೆಂಟ್ ಡೈರೆಕ್ಟರ್ ಬಸವರಾಜ್ ನೇತೃತ್ವದಲ್ಲಿ ಈ ತಂಡ ತನಿಖೆ ಕೈಗೊಳ್ಳಲಿದ್ದು, ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಬಳಿ ಮಾಹಿತಿ ಪಡೆಯಲು ಆಗಮಿಸಿದ್ದಾರೆ.
ಬಂಧಿತ ಆರೋಪಿಗಳಿಗೆ ಮತ್ತೊಂದು ಕಂಟಕ ಎದುರಾಗಿದೆ. ಪ್ರಕರಣದ ಬಂಧಿತ ಆಫ್ರಿಕಾದ ಪ್ರಜೆ ಲೂಮ್ ಪೆಪ್ಪರ್ ಎಂಬಾತನ ಮೂಲಕ ಆರೋಪಿಗಳು ಅಕ್ರಮವಾಗಿ ವಿದೇಶದಲ್ಲಿ ಹಣ ಹೊಡಿಕೆ ಮಾಡಿರುವ ಸಾಧ್ಯತೆ ಇದೆ. ಈ ಬಗ್ಗೆ ನಟಿ ರಾಗಿಣಿ ಹಾಗೂ ಸಂಜನಾ ಆಸ್ತಿ ವಿವರ, ಬಂಧಿತ ಡ್ರಗ್ಸ್ ಪೆಡ್ಲರ್ ಮಾಹಿತಿಯನ್ನ ಪಡೆದು ಸ್ವತಂತ್ರ ತನಿಖೆ ನಡೆಸಿ ಆರೋಪಿಗಳ ವಿಚಾರಣೆ ನಡೆಸಲಿದ್ದಾರೆ.
ಪ್ರಮುಖವಾಗಿ ಪ್ರಮುಖ ಆರೋಪಿ ವಿರೇನ್ ಖನ್ನಾನನ್ನು ಕೂಡ ಇಡಿ ವಿಚಾರಣೆಗೆ ಒಳಪಡಿಸಿದೆ. ವಿರೇನ್ ಖನ್ನಾ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈವೆಂಟ್ಗಳನ್ನ ಆಯೋಜನೆ ಮಾಡುತ್ತಿದ್ದ. ವಿದೇಶದಲ್ಲೂ ವಿರೇನ್ ಖನ್ನಾ ತನ್ನ ಪಾರ್ಟಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಇದರಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆ ಎನ್ನಲಾಗುತ್ತಿದೆ.
ಹಾಗೆಯೇ ನಗರದಲ್ಲಿ ಈತನ ಮನೆ ಮೇಲೆ ದಾಳಿ ಮಾಡಿದ ವೇಳೆ ವಿದೇಶಿ ಕರೆನ್ಸಿ ಕೂಡ ಸಿಕ್ಕಿದೆ. ಇವೆಲ್ಲದರ ಅಧಾರದ ಮೇರೆಗೆ ಶಾಂತಿ ನಗರದ ಬಳಿ ಇರುವ ಇಡಿ ಕಚೇರಿಯಿಂದ ಅಧಿಕಾರಿಗಳು ಆಗಮಿಸಿದ್ದು, ತನಿಖೆ ಹಾಗೂ ಮಾಹಿತಿ ಕಲೆಹಾಕುತ್ತಿದ್ದಾರೆ. ಮತ್ತೊಂದೆಡೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರುವ ನಟಿ ರಾಗಿಣಿ ಹಾಗೂ ಸಂಜನಾ ವಿಚಾರಣೆ ನಡೆಸಲು ಸಿಸಿಬಿ ಇನ್ಸ್ಪೆಕ್ಟರ್ ಅಂಜುಮಾಲಾ ಆಗಮಿಸಿದ್ದಾರೆ. ನಟಿಮಣಿಯರನ್ನ ವೈದ್ಯಕೀಯ ಪರೀಕ್ಷೆ ನಡೆಸಿ ವಿಚಾರಣೆಗೆ ಮಡಿವಾಳದ ಎಫ್ಎಸ್ಎಲ್ಗೆ ಕರೆದೊಯ್ಯುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಮಹಿಳಾ ಸಾಂತ್ವನ ಕೇಂದ್ರದಲ್ಲೇ ಪ್ರತ್ಯೆಕ ವಿಚಾರಣೆ ನಡೆಸಲಿದ್ದಾರೆ.