ಬೆಂಗಳೂರು: ನಗರದಲ್ಲಿ ಚಿನ್ನದ ವ್ಯಾಪಾರಿಗಳು ಹಾಗೂ ಉದ್ಯಮಿಗಳ ಮನೆಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮಾಜಿ ಕಾರ್ಪೋರೇಟರ್ ಅಶ್ವಥಮ್ಮ ಹಾಗೂ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್. ಅಂಬಿಕಾಪತಿ ಹಾಗೂ ಪುತ್ರನ ಮೇಲೆ ದಾಳಿ ನಡೆಸಿದಾಗ ₹42 ಕೋಟಿ ಹಣ ದೊರೆತಿದ್ದು, ಈ ಸಂಬಂಧ ಪ್ರದೀಪ್ ಎಂಬಾತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರದ ಆತ್ಮಾನಂದ ಕಾಲೋನಿಯಲ್ಲಿರುವ ಅಪಾರ್ಟ್ಮೆಂಟ್ನ ಫ್ಲ್ಯಾಟ್‌ನಲ್ಲಿ ದಾಖಲಾತಿ ಇಲ್ಲದ 42 ಕೋಟಿ ಹಣ ದೊರೆತಿದೆ. ಈ ಬಗ್ಗೆ ಪರಿಶೀಲನೆ ವೇಳೆ ಸೂಕ್ತ ಲೆಕ್ಕಪತ್ರ ಇಲ್ಲದ ಕಾರಣ ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಸುಲ್ತಾನ್ ಪಾಳ್ಯ ಹಾಗೂ ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಮನೆ ಸೇರಿದಂತೆ ಮೂರಕ್ಕಿಂತ ಹೆಚ್ಚು ಕಡೆಗಳಲ್ಲಿ ಗುರುವಾರ ರಾತ್ರಿ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲಿಸಿ ಮಹತ್ವದ ದಾಖಲಾತಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಂಬಿಕಾಪತಿ ಮಗ ಪ್ರದೀಪ್ಗೆ ಸೇರಿದ ಫ್ಲ್ಯಾಟ್‌ನಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ ವೇಳೆ ಮಂಚದ ಕೆಳಗೆ 23 ಬಾಕ್ಸ್ಗಳಲ್ಲಿ 500 ಮುಖಬೆಲೆಯ ನೋಟುಗಳ ಬಂಡಲ್ ಪತ್ತೆಯಾಗಿವೆ. 42 ಕೋಟಿ ಹಣ ಹಾಗೂ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.
ಐಟಿ ಇಲಾಖೆಯ ಹಿರಿಯ ಅಧಿಕಾರಿ ಶ್ರೀನಿವಾಸ್ ರಾವ್ ನೇತೃತ್ವದ ತಂಡ ಪರಿಶೀಲಿಸಿ ಹಣವನ್ನು ಬಾಕ್ಸ್‌ನಲ್ಲಿ ತುಂಬಿ ಪ್ಯಾಕ್ ಮಾಡಿ, ಪೊಲೀಸ್ ಭದ್ರತೆಯೊಂದಿಗೆ ಹೆಬ್ಬಾಳದ ಎಸ್ಬಿಐ ಬ್ಯಾಂಕ್ ಶಾಖೆಗೆ ಪ್ರದೀಪ್ನನ್ನು ಕರೆದೊಯ್ದು ಆತನ ಸಮ್ಮುಖದಲ್ಲಿ ಹಣ ಜಮೆ ಮಾಡಿದ್ದಾರೆ. ಈ ಹಣದ ಮೂಲದ ಬಗ್ಗೆ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ.
ಅಂಬಿಕಾಪತಿ ಯಾರು?: ಕಾವಲ್ ಬೈರಸಂದ್ರ ವಾರ್ಡ್ನ ಕಾಂಗ್ರೆಸ್ ಮಾಜಿ ಸದಸ್ಯೆ ಅಶ್ವಥಮ್ಮ ಅವರ ಪತಿ ಅಂಬಿಕಾಪತಿ ಗುತ್ತಿಗೆದಾರನಾಗಿದ್ದು, ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ್ದರು. ಅಲ್ಲದೆ, ಬಿಜೆಪಿ ಶಾಸಕ ಮುನಿರತ್ನ ಮೇಲೆ ಕಮಿಷನ್ ಪಡೆದ ಬಗ್ಗೆ ಆಪಾದಿಸಿದ್ದರು. ಬಳಿಕ ಅಂಬಿಕಾಪತಿ ವಿರುದ್ಧ ಮುನಿರತ್ನ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವೈಯ್ಯಾಲಿಕಾವಲ್ ಪೊಲೀಸರಿಂದ ಅಂಬಿಕಾಪತಿ ಬಂಧನಕ್ಕೊಳಗಾಗಿ ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ಅಶ್ವಥಮ್ಮ ಅವರು ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಅವರ ಸಹೋದರಿಯಾಗಿದ್ದಾರೆ.
ಫ್ಲ್ಯಾಟ್‌ನಲ್ಲಿ ಬಹುಕೋಟಿ ಪತ್ತೆ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಇದು ಯಾರ ಹಣ? ಎಲ್ಲಿಂದ ಬಂತು? ಎಲ್ಲಿಗೆ ಕೊಂಡ್ಯೊಯಲು ಹಣ ಇಟ್ಟಿದ್ದರು. ಎಂಬೆಲ್ಲ ಹತ್ತು ಹಲವು ವಿಚಾರಗಳ ಕುರಿತಂತೆ ವಿಚಾರಣೆ ಆರಂಭಿಸಿದ್ದಾರೆ. ಅಲ್ಲದೆ ಪತ್ತೆಯಾದ ಹಣವನ್ನೆಲ್ಲ ಜಪ್ತಿ ಮಾಡಿರುವ ಅಧಿಕಾರಿಗಳು ಅಂಬಿಕಾಪತಿ, ಅಶ್ವತಮ್ಮ, ಪ್ರದೀಪ್ ಹಾಗೂ ಅವರ ಆಪ್ತ ಬಳಗದಲ್ಲಿರುವವರು ಖಾತೆ ಹೊಂದಿರುವ ಬ್ಯಾಂಕ್ ಮತ್ತು ಲಾಕರ್ ಇರುವ ಬ್ಯಾಂಕ್ಗಳಲ್ಲಿಯೂ ಸಹ ಪರಿಶೀಲನೆ ನಡೆಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದು, ಐಟಿ ಅಧಿಕಾರಿಗಳು ಸಂಪೂರ್ಣ ಡೇಟಾ ಪಡೆಯುವ ಕೆಲಸ ಕೈಗೊಂಡಿದ್ದಾರೆ.
ಪ್ರಕರಣದಲ್ಲಿ 42 ಕೋಟಿ ನಗದು ಸಿಕ್ಕ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಪ್ರಕರಣ ದಾಖಲಿಸುವ ಸಾಧ್ಯತೆಯಿದೆ. ಈ ಬಗ್ಗೆ ಐಟಿ ಅಧಿಕಾರಿಗಳು ಇ.ಡಿಗೆ ಮಾಹಿತಿ ನೀಡಿದ್ದಾರೆ. ಐಟಿ ಇಲಾಖೆಯು ಪ್ರಕ್ರಿಯೆ ಮುಗಿಸಿದ ನಂತರ ಇ.ಡಿ ಕೂಡ ತನಿಖೆ ನಡೆಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಮಾಜಿ ಕಾರ್ಪೊರೇಟರ್ ಸಂಬಂಧಿ ಮನೆಯಲ್ಲಿ ಐಟಿ ದಾಳಿ.. 40 ಕೋಟಿಗೂ ಹೆಚ್ಚು ನಗದು ಪತ್ತೆ!